Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ಜಿಲ್ಲಾಸ್ಪತ್ರೆ ನಿರ್ಮಾಣ

ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ಜಿಲ್ಲಾಸ್ಪತ್ರೆ ನಿರ್ಮಾಣ

ಉಡುಪಿ: ಆಧುನಿಕ, ಸುಸಜ್ಜಿತವಾದ ಎಲ್ಲಾ ಅಗತ್ಯ ಮೂಲ ಸೌಲಭ್ಯವನ್ನೊಳಗೊಂಡ ಜಿಲ್ಲಾಸ್ಪತ್ರೆ ಕಟ್ಟಡವನ್ನು ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜಿಗೆ ಪೂರಕವಾಗಿರುವಂತೆ ನಿರ್ಮಿಸುವಂತೆ ಶಾಸಕ ರಘುಪತಿ ಭಟ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಸ್ಪತ್ರೆ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಜನಸಾಮಾನ್ಯರು ಸುಲಭವಾಗಿ ಆರೋಗ್ಯ ಸೇವೆ ಪಡೆಯುವ ರೀತಿಯಲ್ಲಿ ಕಟ್ಟಡದ ನೀಲನಕ್ಷೆ ತಯಾರಿಸಬೇಕು. ತುರ್ತು ಚಿಕಿತ್ಸಾ ಘಟಕ, ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸೆ ಕೊಠಡಿ, ಪ್ರಯೋಗಶಾಲೆ, ಡಯಾಲಿಸಿಸ್ ಕೇಂದ್ರ, ಐ.ಸಿ.ಯು ಕೇಂದ್ರ ನೆಲ ಮಹಡಿಯಲ್ಲೇ ನಿರ್ಮಿಸುವುದರಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಕಟ್ಟಡ ಹಾಗೂ ಸಿಬ್ಬಂದಿ ವಸತಿಗೃಹವನ್ನು 115 ಕೋ. ರೂ. ವೆಚ್ಚದಲ್ಲಿ 27,375 ಚ. ಮೀ. ವಿಸ್ತೀರ್ಣದಲ್ಲಿ ಕರಾವಳಿ ಭಾಗದ ಹವಾಮಾನಕ್ಕನುಗುಣವಾಗಿ ಸುಸಜ್ಜಿತ ಕಟ್ಟಡವನ್ನು ಶೀಘ್ರದಲ್ಲಿ ಪ್ರಾರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಜನರ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರ ವಾಹನ ನಿಲುಗಡೆಗೆ ಕಟ್ಟಡದ ನೆಲ ಮಾಳಿಗೆಯಲ್ಲಿ ಅವಕಾಶ ಮಾಡಿಕೊಡುವ ರೀತಿಯಲ್ಲಿ ನಿರ್ಮಿಸಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಮುನ್ನ ಜಾಗದ ಲಭ್ಯತೆ ಸೇರಿದಂತೆ ಮತ್ತಿತರ ಪರಿಶೀಲನೆಯನ್ನು ಅಧಿಕಾರಿಗಳು ಹಾಗೂ ಕಟ್ಟಡ ನಿರ್ಮಾಣ ಸಮಾಲೋಚಕರು ಮಾಡಿ, ಸಾಧಕ ಬಾಧಕಗಳನ್ನು ಚರ್ಚಿಸಿ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ನೂತನ ಕಟ್ಟಡವನ್ನು ಪ್ರಸ್ತುತ ಇರುವ ಹಳೆಯ ಆಸ್ಪತ್ರೆ ಕಟ್ಟಡ ಉಳಿಸಿಕೊಂಡು ಆಸ್ಪತ್ರೆ ಹಿಂಭಾಗ ಖಾಲಿ ಇರುವ ಜಾಗದಲ್ಲಿ ನಿರ್ಮಿಸುವುದರಿಂದ ಪ್ರಸ್ತುತ ಇರುವ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆ ಕಟ್ಟಡ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಲಿದೆ ಎಂದರು.
ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನ ಆಸ್ಪತ್ರೆ ಆವರಣದಲ್ಲಿ ಲಭ್ಯವಿದೆ. ಸಣ್ಣಪುಟ್ಟ ಕಟ್ಟಡ ತೆರವು ಮಾಡುವುದರಿಂದ ಮತ್ತಷ್ಟು ನಿವೇಶನ ಲಭಿಸುತ್ತದೆ. ಹೊಸ ಕಟ್ಟಡಕ್ಕೆ ಅಗತ್ಯವಿರುವ ರಸ್ತೆ ಕಾಮಗಾರಿ ಮಾತ್ರ ಹೆಚ್ಚುವರಿಯಾಗಲಿದೆ ಎಂದರು.
ಸಭೆಯಲ್ಲಿ ಜಿ. ಪಂ. ಸಿಇಓ ಡಾ. ನವೀನ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಡಿಎಚ್ ಓ ಡಾ. ಸುಧೀರಚಂದ್ರ ಸೂಡ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!