Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಅತ್ಯಗತ್ಯ

ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಅತ್ಯಗತ್ಯ

ಉಡುಪಿ: ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಅತೀ ಅಗತ್ಯ. ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೋರಾಟ ನಡೆಸುತ್ತಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಅಸೀಂ ಅಕ್ರಂ ತಿಳಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಲವು ವರ್ಷದ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಇನ್ನೂ ಉಡುಪಿ ಜಿಲ್ಲೆಗೆ ಒದಗಿ ಬಂದಿಲ್ಲ. ಓರ್ವ ವಿದ್ಯಾರ್ಥಿ ಅವನ ವಿದ್ಯಾರ್ಥಿ ಜೀವನದ ಅವಧಿಯಲ್ಲಿಯೇ ವೈದ್ಯನಾಗಬೇಕೆಂಬ ಕನಸು ಇಟ್ಟುಕೊಂಡು ಅದರ ಹಿಂದೆ ಬಹಳಷ್ಟು ಶ್ರಮವಹಿಸುತ್ತಾನೆ.

ಆದರೆ ನೀಟ್ ಪರೀಕ್ಷೆ ಬರೆದ ನಂತರ ಕಾಲೇಜು ಪ್ರವೇಶ ಸಮಯದಲ್ಲಿ ಅಲ್ಲಿಯ ಶುಲ್ಕ ಇತ್ಯಾದಿ ಗಮನಿಸಿದಾಗ ಅವನ ಕನಸು ಭಗ್ನವಾಗುವ ಸಾಧ್ಯತೆ ಇದೆ. ಲಕ್ಷಗಟ್ಟಲೆ ಫೀಸ್ ನೀಡಲು ಸಾಧ್ಯವಾಗದೆ ಮತ್ತು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದೇ ಇರುವುದರಿಂದ ಆ ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣದಿಂದ ಹಿಂಜರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಉಲ್ಲೇಖಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬೇಜವಾಬ್ದಾರಿ ಉತ್ತರ ನೀಡಿದ್ದು, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸರ್ಕಾರಿ ಭೂಮಿ ಇಲ್ಲ ಎಂದು ಹೇಳಿದರು ಎಂದು ಅಸೀಂ ಖೇದ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 19 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಯಾವ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲವೋ ಅಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ
ಇಂತಿಷ್ಟು ಶೇ.ದಷ್ಟು ಸರ್ಕಾರಿ ಕೋಟಾ ಇದೆ.

ಈಗಾಗಲೇ ಈ ವಿಚಾರದಲ್ಲಿ ತೀವ್ರ ಹೋರಾಟ ನಡೆಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ತಯಾರಾಗಿದೆ. ಈಗಾಗಲೇ ಹಲವಾರು ಜನಸಾಮಾನ್ಯರು, ಪ್ರಗತಿಪರ ಚಿಂತಕರು, ವಿವಿಧ ಸಾಮಾಜಿಕ ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಎಲ್ಲರೂ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಮುಖಂಡರಾದ ನವಾಜ್ ಉಡುಪಿ ಮತ್ತು ಝಮ್ ಝಮ್, ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ, ಕ್ಯಾಂಪಸ್ ಫ್ರಂಟ್ ಕುಂದಾಪುರ ಕಾರ್ಯದರ್ಶಿ ಅನ್ಫಾಲ್ ಗಂಗೊಳ್ಳಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!