Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲೆಯಲ್ಲೂ ಕೋವಿಡ್ ಮಾರ್ಗಸೂಚಿ ಪ್ರಕಟ

ಜಿಲ್ಲೆಯಲ್ಲೂ ಕೋವಿಡ್ ಮಾರ್ಗಸೂಚಿ ಪ್ರಕಟ

ಸುದ್ದಿಕಿರಣ ವರದಿ
ಬುಧವಾರ, ಜನವರಿ 5, 2022

ಜಿಲ್ಲೆಯಲ್ಲೂ ಕೋವಿಡ್ ಮಾರ್ಗಸೂಚಿ ಪ್ರಕಟ
ಉಡುಪಿ: ಕೋವಿಡ್ ಭೀತಿ ಹೆಚ್ಚಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಜಿಲ್ಲೆಯಾದ್ಯಂತ ಈ ಹಿಂದೆ ಹೊರಡಿಸಿರುವ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಅದರಂತೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಎಲ್ಲಾ ಕಚೇರಿಗಳು ವಾರದ 5 ದಿನಗಳು ಅಂದರೆ ಸೋಮವಾರದಿಂದ ಶುಕ್ರವಾರದ ವರೆಗೆ ಕಾರ್ಯಾಚರಿಸಲಿವೆ.

ವಾರಾಂತ್ಯ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಸಾರಿಗೆ, ತುರ್ತು ಆವಶ್ಯಕತೆಗಳು ಜಾರಿಯಲ್ಲಿರುತ್ತವೆ.

ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್ ಗಳು ಶೇ. 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕಾರ್ಯನಿರ್ವಹಿಸುವುದು. ಹಾಗೂ 2 ಡೋಸ್ ಲಸಿಕೆ ಪಡೆದಿರುವ ವ್ಯಕ್ತಿಗಳಿಗೆ ಮಾತ್ರ ಇಂಥ ಸ್ದಳಗಳಿಗೆ ಪ್ರವೇಶ ಕಲ್ಪಿಸುವುದು.

ಸಿನಿಮಾ ಹಾಲ್ /ಥಿಯೇಟರ್/ ರಂಗಮಂದಿರಗಳು/ ಅಡಿಟೋರಿಯಂ ಮತ್ತು ಇತರ ಸ್ಧಳಗಲ್ಲಿ ಶೇ. 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ ಪಾಲಿಸುವುದು.

ತೆರೆದ ಪ್ರದೇಶಗಳಲ್ಲಿ ನಡೆಸುವ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ 200 ಜನರು ಮೀರದಂತೆ ಹಾಗೂ ಹಾಲ್ ಗಳಲ್ಲಿ ನಡೆಸುವ ಮದುವೆ ಕಾರ್ಯಕ್ರಮಗಳಿಗೆ 100 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶ ಹಾಗೂ ಈ ಸಂದರ್ಭದಲ್ಲಿ ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

ಧಾರ್ಮಿಕ ಸ್ಧಳಗಳಲ್ಲಿ ದರ್ಶನಕ್ಕೆ ಮಾತ್ರ ತೆರೆಯಲು ಅವಕಾಶ. ಯಾವುದೇ ರೀತಿಯ ಸೇವೆ ಹಾಗೂ ಮತ್ತಿತರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಏಕ ಕಾಲದಲ್ಲಿ 2 ಡೋಸ್ ಲಸಿಕೆ ಪಡೆದಿರುವ 50 ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವುದು.

ಮಾಲ್ ಗಳು, ಶಾಫಿಂಗ್ ಕಟ್ಟಡಗಳು, ಎಲ್ಲಾ ರೀತಿಯ ಸ್ವಯಂ ಅಂಗಡಿಗಳು ಹಾಗೂ ಸ್ಥಾಪನೆಗಳು ವಾರದ ದಿನಗಳಲ್ಲಿ ಎಂದಿನಂತೆ ಕಾರ್ಯಾಚರಿಸುವುದು.
ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ಗಳು ಶೇ 50 ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುವುದು ಹಾಗೂ 2 ಡೋಸ್ ಲಸಿಕೆ ಪಡೆದಿರುವ ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವುದು.

ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಂಗಳ ಶೇ 50 ಸಾಮರ್ಥ್ಯಕ್ಕೆ ಒಳಪಟ್ಟು ಕಾರ್ಯಾಚರಿಸುವುದು.
ಎಲ್ಲಾ ರ್ಯಾಲಿ, ಧರಣಿ, ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯದಂಥ ಗಡಿ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರನ್ನು ಪತ್ತೆಹಚ್ಚಿ ಅಗತ್ಯ ಕ್ರಮ ವಹಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾಗಿರುವ ಸುತ್ತೋಲೆ/ ನಿರ್ದೇಶನವನ್ನು ಪಾಲಿಸುವುದು. ಹಾಗೂ ಆ ಮಾರ್ಗಸೂಚಿಯನ್ನು ಗೋವಾ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರಿಗೂ ವಿಸ್ತರಿಸಲಾಗಿದೆ.

ಕೋವಿಡ್ 19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳಿಂದ ಹೊರಡಿಸಲಾದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!