Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿ. ರಾಜಶೇಖರ್ ಅಮರ್ ರಹೇ....: ಕೆಂಪು ವಂದನೆ ಸಲ್ಲಿಸಿದ ಸಂಗಾತಿಗಳು

ಜಿ. ರಾಜಶೇಖರ್ ಅಮರ್ ರಹೇ….: ಕೆಂಪು ವಂದನೆ ಸಲ್ಲಿಸಿದ ಸಂಗಾತಿಗಳು

ಸುದ್ದಿಕಿರಣ ವರದಿ
ಗುರುವಾರ, ಜುಲೈ 21

ಜಿ. ರಾಜಶೇಖರ್ ಅಮರ್ ರಹೇ….ಕೆಂಪು ವಂದನೆ ಸಲ್ಲಿಸಿದ ಸಂಗಾತಿಗಳು
ಉಡುಪಿ: ಚಿಂತಕ ವಿಮರ್ಶಕ ಹೋರಾಟಗಾರ ಜಿ. ರಾಜಶೇಖರ್ ಅಂತ್ಯಕ್ರಿಯೆ ಗುರುವಾರ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನಡೆಯಿತು.

ಯಾವುದೇ ಧಾರ್ಮಿಕ ಆಚರಣೆಗಳಿಲ್ಲದೇ ಪುತ್ರರಾದ ವಿಷ್ಣು ಮತ್ತು ರಘುನಂದನ್ ಚಟ್ಟದಲ್ಲಿಟ್ಟ ರಾಜಶೇಖರ್ ಪಾರ್ಥೀವ ಶರೀರಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬಂದು ಅಗ್ನಿಸ್ಪರ್ಷ ಮಾಡಿದರು.

ಕೆಂಪು ವಂದನೆ
ಅದಕ್ಕೂ ಮುನ್ನ ಜಿಲ್ಲಾಸ್ಪತ್ರೆಯ ಶವಾಗಾರದಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಬಳಿಯ ರಾಜಶೇಖರ್ ಸಂಬಂಧಿ ಮನೆಗೆ ಪಾರ್ಥೀವ ಶರೀರ ತರಲಾಯಿತು.

ಅಗಲಿದ ಸಂಗಾತಿ ರಾಜಶೇಖರ್ ಅವರಿಗೆ ಕಮ್ಯುನಿಸ್ಟ್ ಸಂಪ್ರದಾಯದಂತೆ ಕಾಮ್ರೆಡ್ (ಭುಜಕ್ಕೆ ಭುಜ ಕೊಟ್ಟು ಮುನ್ನಡೆಸುವ ಸಂಗಾತಿ)ಗಳು ಕೆಂಪು ವಂದನೆ ಸಲ್ಲಿಸುವ ಮೂಲಕ ಅಂತಿಮ ನಮನ ಸಮರ್ಪಿಸಿದರು. ಅವರ ಕಾಯಕ ಮುನ್ನಡೆಸುವುದಾಗಿ ಭರವಸೆ ನೀಡಿದರು.

ಜೈ ಭೀಮ್ ಘೋಷಣೆಯ ಮೂಲಕವೂ ಅಂತಿಮ ವಿದಾಯ ಕೋರಲಾಯಿತು.

ಈ ಸಂದರ್ಭದಲ್ಲಿ ಸಿಪಿಐ (ಎಂ)ನ ಬಾಲಕೃಷ್ಣ ಶೆಟ್ಟಿ, ಎ. ಎಸ್. ಆಚಾರ್ಯ, ಪ್ರೊ. ಕೆ. ಫಣಿರಾಜ್, ಕವಿರಾಜ್, ಉದ್ಯಾವರ ನಾಗೇಶಕುಮಾರ್, ಮುನೀರ್ ಕಾಟಿಪಳ್ಳ, ಸುನಿಲ್ ಬಜಾಲ್, ಸಂತೋಷ್ ಬಜಾಲ್, ಸುರೇಶ್ ಕಲ್ಲಾಗರ, ಕವಿರಾಜ್, ಚಂದ್ರಶೇಖರ್, ನಗರಸಭಾ ಸದಸ್ಯ ರಮೇಶ ಕಾಂಚನ್, ರಾಜಶೇಖರ್ ಬಂಧು ಡಾ| ಮಹಾಬಲೇಶ್ವರ ರಾವ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.

ಸಂತಾಪದ ಹರಿವು
ಬಹುಮುಖ ವ್ಯಕ್ತಿತ್ವದ ಜಿ. ರಾಜಶೇಖರ್ ನಿಧನಕ್ಕೆ ಸಂತಾಪದ ಹರಿವು ಬರುತ್ತಿದೆ. ಎಡಪಂಥೀಯ ವಿಚಾರಧಾರೆಯ ನಡೆಯ ಮಂದಿ ಸಂತಾಪ ಸೂಚಿಸಿದ್ದಾರೆ.

ಸಿಪಿಐ (ಎಂ)
ಜಿ. ರಾಜಶೇಖರ್ ನಿಧನ, ಉಡುಪಿ ಜಿಲ್ಲೆಯ ಪ್ರಜಾಸತ್ತಾತ್ಮಕ ಚಳುವಳಿಗೆ ತುಂಬಲಾರದ ನಷ್ಟ ಎಂದು ಸಿಪಿಐ (ಎಂ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಉಡುಪಿಯಲ್ಲಿ ಭಾರತೀಯ ಜೀವ ವಿಮಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಅಲ್ಲಿನ ನೌಕರರ ಬಗ್ಗೆ ಹೋರಾಟ ಮಾಡುತ್ತಲೇ ಅಂದು ಬೆಳೆಯುತ್ತಿದ್ದ ಕೋಮು ವಾದದ ವಿರುದ್ಧ ಗಟ್ಟಿಯಾದ ಧ್ವನಿಯಾಗಿದ್ದರು. ಜೀವ ಬೆದರಿಕೆ ಬಂದಾಗಲೂ ಎದೆಗುಂದಲಿಲ್ಲ.

ಗ್ಯಾಟ್ ಒಪ್ಪಂದದ ವಿರುದ್ಧದ ಹೋರಾಟ, ದಲಿತರ ಪರ ಹೋರಾಟದಲ್ಲಿಯೂ ಅವರು ತೊಡಗಿಕೊಂಡಿದ್ದರು. ಮಾರ್ಕ್ಸ್ ವಾದ ಮತ್ತು ಅಂಬೇಡ್ಕರ್ ವಾದ ಪರಸ್ಪರ ಪೂರಕ ಎಂದು ಗುರುತಿಸಿದ್ದರು ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಸಿಐಟಿಯು ಕಂಬನಿ
ಕಾರ್ಮಿಕರ ಐಕ್ಯತೆಗೆ ಕೋಮು ವಾದದ ವಿರುದ್ಧ ಎಚ್ಚರಿಸುತ್ತಿದ್ದ ಎಡಪಂಥೀಯ ಚಿಂತಕ ಜಿ. ರಾಜಶೇಖರ್ ನಿಧನಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ಸಂತಾಪ ವ್ಯಕ್ತಪಡಿಸಿದೆ.

ಸ್ವತಃ ವಿಮಾ ನೌಕರರಾಗಿ ಹಲವಾರು ಹೋರಾಟ, ಚಳವಳಿ ಮುನ್ನಡೆಸಿದವರು. ಕೋಮು ವಾದದ ಅಪಾಯದ ಕುರಿತ ಅವರ ಹಲವು ಬರಹಗಳು ಕಾರ್ಮಿಕರನ್ನು ಎಚ್ಚರಿಸಲು ನೀಡಿದ ಕೊಡುಗೆ ಮಹತ್ತರ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.

ವೆಲ್ಫೇರ್ ಪಾರ್ಟಿ ಖೇದ
ಮಹಾನ್ ಮಾನವತಾ ವಾದಿಯನ್ನು ಕಳೆದುಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಬಣ್ಣಿಸಿದೆ.

ಸಹಬಾಳ್ವೆ ಬಗ್ಗೆ ಅಪಾರ ಕಾಳಜಿಯುಳ್ಳ, ಅನ್ಯಾಯದ ವಿರುದ್ಧ ನಿರಂತರ ಹೋರಾಡುತ್ತಾ ನ್ಯಾಯಕ್ಕಾಗಿ ರಾಜಶೇಖರ್ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಲೇಖನಿ, ಅನ್ಯಾಯದ ವಿರುದ್ಧ ಪ್ರಬಲ ಆಯುಧವಾಗಿತ್ತು.

ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ರಾಜೀ ರಹಿತ ಹೋರಾಟ ನಡೆಸಿದ್ದಲ್ಲದೆ, ಇತರರಿಗೆ ಹೋರಾಟದ ಸ್ಪೂರ್ತಿಯಾಗಿದ್ದರು ಎಂದು ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾದ್ಯಕ್ಷ ಅಬ್ದುಲ್ಅಝೀಝ್ ಉದ್ಯಾವರ ತಿಳಿಸಿದ್ದಾರೆ.

ಸಾಲಿಡಾರಿಟಿ ದುಃಖ
ದಮನಿತರ ಧ್ವನಿ, ನ್ಯಾಯದ ಪರ ಹೋರಾಟಗಾರ ಜಿ. ರಾಜಶೇಖರ್ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಸಾಲಿಡಾರಿಟಿ ಉಡುಪಿ ತಿಳಿಸಿದೆ.

ನಾಡಿನ ಸಾಕ್ಷಿ ಪ್ರಜ್ಞೆ, ಹಿರಿಯ ಚಿಂತಕ, ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ ನಿರಂತರ ಹೋರಾಡಿದ ಜಿ. ರಾಜಶೇಖರ್ ಸರಳ ಸ್ವಭಾವದ, ನಾಡಿನ ಬಹುತ್ವದ ಗಟ್ಟಿ ಧ್ವನಿಯಾಗಿದ್ದರು ಎಂದು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ತಿಳಿಸಿದೆ.

ವಿಮಾ ನೌಕರರ ಸಂಘ ಸಂತಾಪ
ಮಾರ್ಕ್ಸ್ ವಾದಿ ಚಿಂತಕ ಕಾಮ್ರೆಡ್ ಜಿ. ರಾಜಶೇಖರ್ ನಿಧನಕ್ಕೆ ವಿಮಾ ನೌಕರರ ಸಂಘ ಉಡುಪಿ ವಿಭಾಗ ಶ್ರದ್ಧಾಂಜಲಿ ಸಲ್ಲಿಸಿದೆ.

ಕರಾವಳಿಯಲ್ಲಿ ನಡೆದ ಕೆಲವು ಕೋಮು ಗಲಭೆಗಳು, ಚರ್ಚ್ ಮೇಲಿನ ದಾಳಿಗಳ ಸತ್ಯಶೋಧನಾ ತಂಡದ ಸದಸ್ಯರಾಗಿ ಧೈರ್ಯದಿಂದ ಮುನ್ನುಗ್ಗಿ ಗಲಭೆಯಿಂದ ತೊಂದರೆಗೊಳಗಾದವರಿಗೆ ನ್ಯಾಯ ದೊರಕಿಸಲು ಅವಿರತ ಹೋರಾಟ ನಡೆಸಿದ್ದಾರೆ.

ನಾಡು ಕಂಡ ಖ್ಯಾತ ಚಿಂತಕ, ಸಾಹಿತ್ಯ ವಿಮರ್ಶಕ, ಕೋಮು ವಾದದ ವಿರುದ್ಧದ ಹೋರಾಟಗಾರ, ವಿಮಾ ನೌಕರರ ಸಂಘದ ನಾಯಕರಾಗಿದ್ದ ಜಿ. ರಾಜಶೇಖರ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕುಂದರ್ ತಿಳಿಸಿದ್ದಾರೆ.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!