ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 8
ಜುಲೈ 10ರಂದು ವೈದ್ಯಸಿರಿ ಪ್ರಶಸ್ತಿ ಪ್ರದಾನ
ಉಡುಪಿ: ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಶಾಖೆ ಆಶ್ರಯದಲ್ಲಿ ಈ ತಿಂಗಳ 10ರಂದು ವೈದ್ಯರ ದಿನಾಚರಣೆ ಮಾಡಲಾಗುತ್ತಿದ್ದು, ಅಂದು ಮೂರು ಮಂದಿ ಸಾಧಕ ಆಯುರ್ವೇದ ವೈದ್ಯರನ್ನು ವೈದ್ಯಸಿರಿ ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು ಎಂದು ಫೆಡರೇಶನ್ ಜಿಲ್ಲಾಧ್ಯಕ್ಷ ಡಾ. ಎನ್. ಟಿ. ಅಂಚನ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಅವರು, ನಗರದ ಹೋಟಲ್ ಮಣಿಪಾಲ್ ಇನ್ ನಲ್ಲಿ ಅಂದು ಅಪರಾಹ್ನ 3ರಿಂದ ನಡೆಯುವ ಕಾರ್ಯಕ್ರಮದಲ್ಲಿ ಮೊದಲಿಗೆ ವೈದ್ಯರ ಕುಟುಂಬೋತ್ಸವ ನಡೆಸಲಾಗುವುದು.
ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ವಕೀಲ ವಿವೇಕಾನಂದ ಪನಿಯಾಲ ಸಾಧಕ ವೈದ್ಯರಾದ ಡಾ. ಭರತೇಶ ಕಾರ್ಕಳ, ಡಾ. ಜಿ ಎಂ. ಕಂಠಿ ಮಣಿಪಾಲ ಹಾಗೂ ಡಾ. ಸುರೇಶ ಶೆಟ್ಟಿ ಕುಂದಾಪುರ ಅವರನ್ನು ವೈದ್ಯಸಿರಿ ಪ್ರಶಸ್ತಿಯೊಂದಿಗೆ ಸನ್ಮಾನಿಸುವರು.
ರಂಗ ನಟ ಅರವಿಂದ ಬೋಳಾರ್, ಫೆಡರೇಶನ್ ರಾಜ್ಯ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ್ ಮತ್ತು ಉಡುಪಿ ಗಿರಿಜಾ ಸರ್ಜಿಕಲ್ಸ್ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಅಭ್ಯಾಗತರಾಗಿ ಆಗಮಿಸುವರು ಎಂದು ಡಾ. ಅಂಚನ್ ವಿವರಿಸಿದರು.
ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಡಾ. ಸತೀಶ ರಾವ್, ಸಂಘಟನಾ ಕಾರ್ಯದರ್ಶಿ ಡಾ. ಸಂದೀಪ ಸನಿಲ್, ಕೋಶಾಧಿಕಾರಿ ಶಿವಶಂಕರ್ ಕೆ. ಮತ್ತು ಉಪಾಧ್ಯಕ್ಷ ಯು. ಕೆ. ಶೆಟ್ಟಿ ಕಟಪಾಡಿ ಇದ್ದರು.