Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಡಿಸಿ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಡಿಸಿ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಡಿಸಿ
(ಸುದ್ದಿಕಿರಣ ವರದಿ)

ಬೈಂದೂರು: ಕೊರೊನಾದಿಂದ ಸ್ಥಗಿತಗೊಂಡಿದ್ದ, ಪ್ರತೀ ತಿಂಗಳ 3ನೇ ಶನಿವಾರ ನಡೆಯುತ್ತಿದ್ದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸರಕಾರದ ಸೂಚನೆಯಂತೆ ಮತ್ತೆ ಆರಂಭಗೊಂಡಿದ್ದು, ಶನಿವಾರ ಜಡ್ಕಲ್ ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೂ ಮುನ್ನ ಜಡ್ಕಲ್ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೂರ್ಮರಾವ್, ಗ್ರಂಥಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಳಿಕ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾ ಕೇಂದ್ರದಿಂದ ಬಹಳಷ್ಟು ದೂರದಲ್ಲಿರುವ ಈ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ಯೆ ಬಗ್ಗೆ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಾರ್ವಜನಿಕರು ಆಗಮಿಸಲು ಕಷ್ಟವಾಗಲಿದ್ದು, ಇಲ್ಲಿನ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಆಶಯದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಸ್ಥಳೀಯರಾದ ರಾಜು ಪೂಜಾರಿ, ದೃಷ್ಟಿದೋಷ ಕುರಿತಂತೆ ಪ್ರಮಾಣಪತ್ರ ಪಡೆಯಲು ಸಮಸ್ಯೆ ಇದೆ. ದಿವ್ಯಾಂಗರಿಗೆ ಖಾಸಗಿ ಬಸ್ ನಲ್ಲೂ ಉಚಿತ ಪಾಸ್ ವ್ಯವಸ್ಥೆ, ಈಗಾಗಲೇ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿರುವ ಉಚಿತ ಪ್ರಯಾಣದ 100 ಕಿ.ಮೀ. ಮಿತಿಯನ್ನು ರಾಜ್ಯಾದ್ಯಂತ ಸಂಚರಿಸಲು ವಿಸ್ತರಿಸಬೇಕು.

ಎಲ್ಲಾ ಇಲಾಖೆಗಳ 5 ಶೇ. ಅನುದಾನದ ಸಮರ್ಪಕ ಬಳಕೆಯಾಗಬೇಕು. ಎಲ್ಲಾ ಕಾರ್ಯಾಲಯಗಳನ್ನು ವಿಶೇಷ ಚೇತನ ಸ್ನೇಹಿ ಕಾರ್ಯಾಲಯಗಳನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು

ದಿವ್ಯಾಂಗರಿಗೆ ಖಾಸಗಿ ಬಸ್ ನಲ್ಲಿ ಉಚಿತ ಪಾಸ್ ನೀಡುವ ಕುರಿತಂತೆ ಆರ್.ಟಿ.ಎ. ಸಭೆಯಲ್ಲಿ ಚರ್ಚಿಸಿ ಪ್ರಯತ್ನಿಸಲಾಗುವುದು. ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಕಚೇರಿಗಳನ್ನು ವಿಶೇಷ ಚೇತನ ಸ್ನೇಹಿಯಾಗುವಂತೆ ನಿರ್ಮಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು.

ವಿಕಲಚೇತನರಿಗೆ ಮೀಸಲಿರುವ 5 ಶೇ. ಅನುದಾನದ ಸದ್ಬಳಕೆ ಕುರಿತಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದ ಜಿಲ್ಲಾಧಿಕಾರಿ, ಇತರ ಸಮಸ್ಯೆಗಳ ಕುರಿತಂತೆ ರಾಜ್ಯ ಮಟ್ಟದಲ್ಲಿ ನಿರ್ಧಾರವಾಗಬೇಕಿದ್ದು, ಮನವಿಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.

ಜಡ್ಕಲ್ ಮತ್ತು ಮುಧೂರಿನಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣ ಕುರಿತಂತೆ ಗ್ರಾಮಸ್ಥರು ಸಲ್ಲಿಸಿದ ಮನವಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದರು.

ಈಗಾಗಲೇ ಈ ಎರಡೂ ಗ್ರಾಮದಲ್ಲಿ ತಲಾ ಒಂದು ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದ್ದು, ಗಡಿ ಗುರುತು ಬಾಕಿ ಇದೆ. 2 ವಾರದಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬೈಂದೂರು ತಹಸೀಲ್ದಾರ್ ಗೆ ಸೂಚಿಸಿದರು.

ಮುಧೂರು ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಕೊರತೆ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ದೊರೆತಿದ್ದು ಸ್ಥಳೀಯ ಅಥವಾ ಯಾವುದೇ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಲು ಇಚ್ಛಿಸಿದಲ್ಲಿ ಕೂಡಲೇ ಆದೇಶ ಪತ್ರ ನೀಡಲಾಗುವುದು ಎಂದರು.

ಈ ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಕುರಿತಂತೆ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಮಧೂರಿನಲ್ಲಿ ಸಬ್ ಸ್ಟೇಶನ್ ನಿರ್ಮಾಣ ಕಾಮಗಾರಿ ಮುಕ್ತಾಯಗೊಳಿಸಲು ಅರಣ್ಯ ಇಲಾಖೆಯ ಎಕೋ ಸೆನ್ಸಿಟಿವ್ ಝೋನ್ ಸಮಸ್ಯೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಡ್ಕಲ್ ಗ್ರಾಮ ವ್ಯಾಪ್ತಿಯ ಸಳಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಪ್ರಸ್ತುತ ಖಾಸಗಿ ಶಾಲೆಯನ್ನು ತೊರೆದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಶಾಲಾ ಕಟ್ಟಡ ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ಕಟ್ಟಡ ಮತ್ತು ಶೌಚಾಲಯವನ್ನು ಆಧುನಿಕ ರೀತಿಯಲ್ಲಿ ಮೇಲ್ದರ್ಜೆಗೇರಿಸುವಂತೆ ಪೋಷಕರು ಕೋರಿದರು. ಶಾಲೆಯಲ್ಲಿ 3 ಮಂದಿ ಖಾಯಂ ಶಿಕ್ಷಕರು ಮಾತ್ರವಿದ್ದು, ಒಂದನೇ ತರಗತಿಯಿಂದ ಶಾಲೆ ಆರಂಭವಾಗುವ ನಿರೀಕ್ಷೆ ಇರುವುದರಿಂದ ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಶಾಲೆಯ ಶಿಕ್ಷಕರು ಕೋರಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಡ್ಕಲ್ ವ್ಯಾಪ್ತಿಯ ಮೆಕ್ಕೆಯಲ್ಲಿ ನೂತನ ಅಂಗನವಾಡಿ ಆರಂಭಿಸುವ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ, ಸಾಧ್ಯವಿದ್ದಲ್ಲಿ ಮಿನಿ ಅಂಗನವಾಡಿಯನ್ನು ಶೀಘ್ರದಲ್ಲಿ ಆರಂಭಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಗ್ರಾಮದಲ್ಲಿ 95 ಶೇ.ದಷ್ಟು ಪ್ರಥಮ ಡೋಸ್ ಕೋವಿಡ್ ಲಸಿಕೆ ನೀಡಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಗ್ರಾಮದಲ್ಲಿ 100 ಶೇ. ಪ್ರಥಮ ಡೋಸ್ ಲಸಿಕೆ ಗುರಿ ಸಾಧಿಸುವಂತೆ ಹಾಗೂ ಎರಡನೇ ಡೋಸ್ ಗೆ ಅವಧಿ ಬಂದಿರುವ ಎಲ್ಲಾ ಸಾರ್ವಜನಿಕರು ತಪ್ಪದೇ ಲಸಿಕೆ ಪಡೆಯುವಂತೆ ತಿಳಿಸಿದರು.

ಪಡಿತರ ಚೀಟಿಗಳಿಗೆ ಇ ಕೆವೈಸಿ ಮಾಡಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಡ್ಕಲ್ ಗ್ರಾ. ಪಂ. ಅಧ್ಯಕ್ಷೆ ವನಜಾಕ್ಷಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ ಮೊದಲಾದವರಿದ್ದರು.

ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮಿ ಸ್ವಾಗತಿಸಿದರು.

ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 57ಕ್ಕೂ ಅರ್ಜಿಗಳಿಗೆ ಸಂಬಂಧಿಸಿ ಸ್ಥಳದಲ್ಲೇ ಸೂಕ್ತ ಪರಿಹಾರ ಕೈಗೊಳ್ಳಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!