Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ತಂಡವಾಗಿ ಕೆಲಸ ಮಾಡಿದಲ್ಲಿ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ

ತಂಡವಾಗಿ ಕೆಲಸ ಮಾಡಿದಲ್ಲಿ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ

ಸುದ್ದಿಕಿರಣ ವರದಿ
ಶನಿವಾರ, ಜೂನ್ 18

ತಂಡವಾಗಿ ಕೆಲಸ ಮಾಡಿದಲ್ಲಿ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ
ಬ್ರಹ್ಮಾವರ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಂಡದ ರೀತಿಯಲ್ಲಿ ಕೆಲಸ ನಿರ್ವಹಿಸಿದಲ್ಲಿ ಸಾರ್ವಜನಿಕರ ಎಲ್ಲಾ ಸಮಸ್ಯೆಗಳಿಗೆ ಶೀಘ್ರದಲ್ಲಿ ನ್ಯಾಯಯುತ ಪರಿಹಾರ ಒದಗಿಸಲು ಸಾಧ್ಯವಾಗಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಶನಿವಾರ ಇಲ್ಲಿನ ಚೇರ್ಕಾಡಿ ಗ್ರಾಮ ವ್ಯಾಪ್ತಿಯ ಪೇತ್ರಿ ಯುವಕ ಮಂಡಲ ವಠಾರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರು ತಮ್ಮ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಳಿ ಬರುತ್ತಾರೆ. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ದೊರೆತರೆ ಮಾತ್ರ ಸರಕಾರ ಮತ್ತು ಆಡಳಿತ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು ಎಂದರು.

ಜನತೆಗೆ ಅನುಕೂಲ
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಸರ್ಕಾರ, ದೂರದ ಗ್ರಾಮೀಣ ಪ್ರದೇಶದ ಜನರ ಬಳಿ ತೆರಳಿ ಅವರ ಸಮಸ್ಯೆಗಳ ಅಹವಾಲು ಸ್ವೀಕರಿಸುವುದರಿಂದ ಜನರಿಗೆ ತುಂಬಾ ಉಪಯುಕ್ತವಾಗಿದೆ. ಜಿಲ್ಲಾಧಿಕಾರಿ ನೇರವಾಗಿ ಜನರನ್ನು ಭೇಟಿ ಮಾಡುವುದರಿಂದ ಅವರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ, ಉಪಯುಕ್ತ ಮಾಹಿತಿ ನೀಡುವುದರಿಂದ ಜನರ ಸಮಸ್ಯೆಗಳನ್ನು ಬೇಗನೇ ಸರಿಪಡಿಸಬಹುದು ಎಂದರು.

ಪರಿಶಿಷ್ಟ ವರ್ಗದ ಜನರು ಅಧಿಕವಾಗಿರುವ ಚೇರ್ಕಾಡಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಅಗತ್ಯ ದಾಖಲೆ ಪತ್ರ ಪಡೆಯಲು ತೊಂದರೆಗಳಿದ್ದು, ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕು. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಇರುವ ಗಡಿರೇಖೆ ನಿಯಮಗಳು ಅವೈಜ್ಞಾನಿಕವಾಗಿದ್ದು, ಆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಆ ಬಗೆಗಿನ ನಿಯಮಗಳ ಕುರಿತು ಅಧಿಕಾರಿಗಳು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೂಲಕ ನಿರ್ದೇಶನ ಪಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುಷ್ಠಾನಗೊಳಿಸಬೇಕು ಎಂದರು.

ಅಗತ್ಯ ದಾಖಲೆ ಪತ್ರ ಪಡೆಯಲು ಕ್ರಮ
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿದರೆ ಸಾರ್ವಜನಿಕರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಹಾಗೂ ಉತ್ತಮ ಭಾವನೆ ಮೂಡಲಿದೆ. ಜನತೆಗೆ ಉತ್ತಮ ಸೇವೆ ಒದಗಿಸುವ ಬಗ್ಗೆ ಅಧಿಕಾರಿಗಳು ಸಂಕಲ್ಪ ಮಾಡಬೇಕು.

ಚೇರ್ಕಾಡಿ ಭಾಗದಲ್ಲಿ ಹಲವು ವರ್ಷದಿಂದ ಬಾಕಿ ಇರುವ ಹಕ್ಕುಪತ್ರ ಬದಲಾವಣೆ, 11ಇ ನಕ್ಷೆ ತಿದ್ದುಪಡಿ ಹಾಗೂ ಪೌತಿ ಖಾತೆ ಸರಿಪಡಿಸಲು, ಜನನ ಮರಣ ಪ್ರಮಾಣ ಪತ್ರ ವಿತರಿಸಲು ವಿಶೇಷ ಅಭಿಯಾನ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಇಂದಿನ ಕಾರ್ಯಕ್ರಮದಲ್ಲಿಯೇ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದ ಗ್ರಾ.ಪಂ. ಸದಸ್ಯ ಹರೀಶ್ ಶೆಟ್ಟಿ, ರಸ್ತೆ ನಿರ್ಮಾಣದ ನಿಯಮಗಳ ಸರಳೀರಣದ ಅಗತ್ಯತೆ ಬಗ್ಗೆ ಹೇಳಿದರು.

ಗ್ರಾ. ಪಂ. ಸದಸ್ಯ ಕಮಲಾಕ್ಷ ಹೆಬ್ಬಾರ್ ಮಾತನಾಡಿ, ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದರೂ ಹೆಚ್ಚಿನ ಗುರಿ ದೊರೆಯುತ್ತಿಲ್ಲ. ಅದರಿಂದ ಹಲವರು ಮನೆ ಇಲ್ಲದೆ ವಂಚಿತರಾಗಿದ್ದಾರೆ.

ಗ್ರಾಮದಲ್ಲಿ 600ಕ್ಕೂ ಹೆಚ್ಚು ಹೈನುಗಾರರಿದ್ದು ಇಲ್ಲಿನ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಪೂರ್ಣಕಾಲಿಕ ಪಶು ವೈದ್ಯರನ್ನು ನೇಮಿಸಬೇಕು ಮತ್ತು ಕಂದಾಯ ಸೇವೆಗಳನ್ನು ಸಮರ್ಪಕವಾಗಿ ನೀಡಲು ಪೂರ್ಣಕಾಲಿಕ ಗ್ರಾಮಲೆಕ್ಕಿಗರನ್ನು ನೇಮಿಸಬೇಕು ಎಂದರು.

ಹೆಚ್ಚುವರಿ ಮನೆ ನಿರ್ಮಾಣ
ಅದಕ್ಕುತ್ತರಿಸಿದ ಜಿ.ಪಂ. ಸಿಇಓ ಪ್ರಸನ್ನ ಎಚ್., ಜಿಲ್ಲೆಯ ಇತರ ಗ್ರಾ. ಪಂ.ನಲ್ಲಿರುವ ಹೆಚ್ಚುವರಿ ಮನೆ ನಿರ್ಮಾಣದ ಗುರಿಯನ್ನು ಒಂದು ವಾರದೊಳಗೆ ಈ ಪಂಚಾಯತ್ ಗೆ ವರ್ಗಾಯಿಸುವ ಕುರಿತು ಆದೇಶ ಮಾಡಿ, ಮನೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎನ್ನುವ ಮೂಲಕ ಹಲವು ವರ್ಷಗಳ ಪರಿಶಿಷ್ಟ ವರ್ಗದ ಜನರ ವಸತಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

ಹಾಲು ಕರೆಯುವ ಯಂತ್ರ, ಹಸು ಘಟಕ ನಿರ್ಮಾಣಕ್ಕೆ ಸಹಾಯಧನ, 26 ಮಂದಿಗೆ ಸಂಧ್ಯಾ ಸುರಕ್ಷಾ, 9 ಮಂದಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ಪಡಿತರ ಚೀಟಿ, ಮನೆ ಮಂಜೂರಾತಿ ಸೌಲಭ್ಯ ಒದಗಿಸಲಾಯಿತು.

ಕಂದಾಯ ಇಲಾಖೆಗೆ ಸಂಬಂಧಿಸಿದ 27, ಪಂಚಾಯತ್ ಗೆ ಸಂಬಂಧಿಸಿದ 15 ಅರ್ಜಿ ಸೇರಿದಂತೆ 55ಕ್ಕೂ ಅಧಿಕ ಅರ್ಜಿಗಳ ವಿಚಾರಣೆ ಹಾಗೂ ವಿಲೇವಾರಿ ನಡೆಯಿತು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನಡೆಸಿದ ಮಾಹಿತಿ ಶಿಕ್ಷಣ ಸಂವಹನ ಸ್ಪರ್ಧೆಯ ಲಕ್ಕಿ ಡ್ರಾ ವಿಜೇತ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು ಹಾಗೂ ಡೆಂಗ್ಯೂ, ಮಲೇರಿಯಾ, ಕೋವಿಡ್ ಬಗ್ಗೆ ಅರಿವು ಮೂಡಿಸಲಾಯಿತು.

ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರಮೂರ್ತಿ ಸ್ವಾಗತಿಸಿದರು.

ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಭಟ್, ಗ್ರಾಮ ಉಪಾಧ್ಯಕ್ಷ ಕಿಟ್ಟಪ್ಪ ಅಮೀನ್, ಕುಂದಾಪುರ ಡಿ.ಎಫ್.ಓ ಆಶೀಶ್ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಭೂ ದಾಖಲೆ ಇಲಾಖೆ ಉಪನಿರ್ದೇಶಕ ರವೀಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋವಿಂದ ಮಡಿವಾಳ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಂಕರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಚ್. ಇಬ್ರಾಹಿಂ ಪೂರ್, ಆಹಾರ ಇಲಾಖೆ ಉಪನಿರ್ದೇಶಕ ಮೊಹಮ್ಮದ್ ಇಸಾಕ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಟಿ. ನಾಯಕ್ ಮೊದಲಾದವರಿದ್ದರು.

ಶಾಲೆಯಲ್ಲಿ ಡಿಸಿ ವಾಸ್ತವ್ಯ
ಜಿಲ್ಲಾಧಿಕಾರಿ ಕೂರ್ಮಾರಾವ್ ಶನಿವಾರ ರಾತ್ರಿ ಚೇರ್ಕಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದರು.

ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶಾಲೆಯಲ್ಲಿ ರಾತ್ರಿ ಕಳೆದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!