ಉಡುಪಿ: ವಿಷ್ಣ್ವೈಕ್ಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂಬ ಅಭಿನಾಮದಿಂದ, ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆ ಮಾಡಿದ್ದ ತಪೋವನಿ ಮಾತಾಜಿ ಗುರುವಾರ ಹರಿದ್ವಾರದ ಶ್ರೀರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮೂಲತಃ ಇಲ್ಲಿನ ಪಂದುಬೆಟ್ಟಿನವರಾಗಿದ್ದು, ಎಳವೆಯಲ್ಲಿಯೇ ಆಧ್ಯಾತ್ಮದತ್ತ ಆಕರ್ಷಿತರಾಗಿದ್ದರು. ಕಳೆದ ಸುಮಾರು 60 ವರ್ಷದ ಪೂರ್ವದಲ್ಲಿ ಹಿಮಾಲಯ ಸೇರಿ, ಪ್ರತಿಕೂಲ ವಾತಾವರಣದಲ್ಲೂ ನಿರಂತರ 9 ವರ್ಷ ಕಾಲ ತಪಸ್ಸನ್ನಾಚರಿಸಿದ್ದರು. ಅವರ ಆ ಸಾಧನೆಯಿಂದಲೇ ಹಿಮಾಲಯ ಪ್ರದೇಶದಲ್ಲಿ ತಪೋವನೀ ಮಾ ಎಂದೇ ಪ್ರಸಿದ್ಧರಾಗಿದ್ದರು.
ಹಿಮಾಲಯದ ಪ್ರದೇಶದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳು, ಯಾತ್ರಿಗಳಿಗೆ ಊಟೋಪಚಾರ, ಆರೋಗ್ಯ ಸೇವೆ ನಡೆಸುತ್ತಿದ್ದರು. ಅನಾರೋಗ್ಯಕ್ಕೊಳಗಾದ ಬಳಿಕ ಹರಿದ್ವಾರದ ಆಚಾರ್ಯ ಬಾಲಕೃಷ್ಣ ಅವರ ವಿಶೇಷ ಮುತುವರ್ಜಿಯಲ್ಲಿ ಸ್ಥಳೀಯ ರಾಮಕೃಷ್ಣ ಆಶ್ರಮ ಆಸ್ಪತ್ರೆಯಲ್ಲಿ ಕಳೆದ ಕೆಲವು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಸಾಧನೆಯ ಹೊತ್ತಗೆ
ಅವರ ಆಧ್ಯಾತ್ಮ ಸಾಧನೆ ಕುರಿತು ಹಿಂದಿಯಲ್ಲಿ ಪುಸ್ತಕವೊಂದು ಪ್ರಕಟವಾಗಿದೆ. ಅದರ ಕನ್ನಡ ಅನುವಾದವನ್ನು ಪ್ರೊ. ಭಾಸ್ಕರ ಮಯ್ಯ ಮಾಡಿದ್ದು, ಅದನ್ನು ಈಚೆಗೆ ಹರಿದ್ವಾರ ಭೇಟಿ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಆಚಾರ್ಯ ಬಾಲಕೃಷ್ಣ ಅವರು ಮಾತಾಜಿ ಸಮ್ಮುಖದಲ್ಲಿ ಅನಾವರಣಗೊಳಿಸಿದ್ದರು.
ಈ ಕಾರ್ಯಕ್ಕಾಗಿ ವಾಸುದೇವ ಭಟ್ ಪೆರಂಪಳ್ಳಿ ಬಹಳ ಶ್ರಮಿಸಿದ್ದರು.
ಸಂತಾಪ
ತಪೋವನೀ ಮಾ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮತ್ತು ತಮ್ಮ ಗುರುಗಳಲ್ಲಿ ಅನನ್ಯ ಶ್ರದ್ಧೆ, ಭಕ್ತಿ ಹೊಂದಿದ್ದ ಮಾತಾಜಿ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗುವಂತೆ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಕೇಂದ್ರ ಮಾಜಿ ಸಚಿವೆ ಸಾಧ್ವಿ ಉಮಾಭಾರತಿ, ಪ್ರೊ. ಭಾಸ್ಕರ ಮಯ್ಯ, ಪೇಜಾವರ ಮಠ ದಿವಾನ ರಘುರಾಮಾಚಾರ್ಯ, ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಶ್ಯಾಮಲಾ ಕುಂದರ್, ವಾಸುದೇವ ಭಟ್ ಪೆರಂಪಳ್ಳಿ ಶೋಕ ವ್ಯಕ್ತಪಡಿಸಿದ್ದಾರೆ.