ಸುದ್ದಿಕಿರಣ ವರದಿ
ಸೋಮವಾರ, ಜನವರಿ 31
ಸಾಮಾಜಿಕ ತಲ್ಲಣಗಳಿಗೆ ವಾದ ಉತ್ತರವಲ್ಲ
ಉಡುಪಿ: ಸಾಮಾಜಿಕ ತಲ್ಲಣಗಳಿಗೆ ವಾದವೊಂದೇ ಉತ್ತರವಾಗಲಾರದು. ವಾದದಲ್ಲಿ ಅಹಂಭಾವ ಇರುತ್ತದೆ. ಆದರೆ, ಸಂವಾದದ ಮೂಲಕ ಅರಿವು ಹೆಚ್ಚುತ್ತದೆ. ಆದ್ದರಿಂದ ಚರ್ಚೆಯೇ ಉತ್ತಮ ಮಾರ್ಗ ಎಂದು ಚಲನಚಿತ್ರ ನಿರ್ದೇಶಕ ಡಾ| ಗಿರೀಶ ಕಾಸರವಳ್ಳಿ ಪ್ರತಿಪಾದಿಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಆಶ್ರಯದಲ್ಲಿ ಸೋಮವಾರ ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ನಡೆದ ಸಂಸ್ಕೃತಿ ಉತ್ಸವದಲ್ಲಿ ಒಂದು ಲಕ್ಷ ರೂ. ನಗದು ಸಹಿತ ವಿಶ್ವಪ್ರಭಾ ಪುರಸ್ಕಾರ ಸ್ವೀಕರಿಸಿ, ಮಾತನಾಡಿದರು.
ಮನುಷ್ಯ ಎಲ್ಲವನ್ನೂ, ಎಲ್ಲರನ್ನೂ ಸಹಾನುಭೂತಿಯಿಂದ ನೋಡುವುದನ್ನು ಕಲಿಯಬೇಕು ಎಂದವರು ಕಿವಿಮಾತು ಹೇಳಿದರು.
ಪ್ರತೀ ಕಲೆಯೂ ಹುಟ್ಟುಹಾಕಬೇಕಾದ ಒಳನೋಟ ಸಂವಾದ. ಆದರೆ, ರಾಜಕೀಯ ಸಭೆಗಳಲ್ಲಿ ಕೇವಲ ವಾದ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಧರ್ಮ ಮತ್ತು ರಾಜಕೀಯಕ್ಕಿಂತ ಕಲೆ ಶ್ರೇಷ್ಠ ಎಂದರು.
ಇದೀಗ ಸಿನೆಮಾ ರಂಗ, ಕಲಾಕ್ಷೇತ್ರದೊಂದಿಗೆ ಉದ್ಯಮವಾಗಿದೆ ಎಂದು ವಿಷಾದಿಸಿದರು.
ಬದುಕಿನಲ್ಲಿ ಕಲೆ ಅನಿವಾರ್ಯ
ಚೆಂಡೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಕಲೆ ಬದುಕಿನಲ್ಲಿ ಅನಿವಾರ್ಯ. ರಂಗ ಪ್ರಯೋಗಗಳು ಜೀವನದಲ್ಲಿ ನವಚೈತನ್ಯ ನೀಡುತ್ತವೆ. ಕಲಾ ಕ್ಷೇತ್ರದಲ್ಲಿ ದುಡಿದವರನ್ನು ಕಲೆಯೇ ಬೆಳೆಸುತ್ತದೆ ಎಂದರು.
ಕೋವಿಡ್ ನಂಥ ವಿಷಮ ಕಾಲಘಟ್ಟದ ತಲ್ಲಣಗಳ ನಡುವೆ ಬದುಕಿಗೆ ಧೈರ್ಯ ಶಕ್ತಿ ಆರೋಗ್ಯ ನೀಡುವ ಕಲೆ ಸಂಸ್ಕೃತಿ ಉತ್ಸವಗಳು ನಡೆಯುತ್ತಿರಬೇಕು ಎಂದು ಡಾ. ಆಳ್ವ ಆಶಿಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಹಾಗೂ ಪ್ರಭಾವತಿ ಶೆಣೈ, ಕರ್ನೂಲು ಉದ್ಯಮಿ ರಘುವೀರ ಶೆಣೈ, ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ್ ಅಭ್ಯಾಗತರಾಗಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್ ಬೇಗಾರ್ ಅಭಿನಂದನ ಮಾತುಗಳನ್ನಾಡಿದರು.
ರಾಜೇಶ್ ಭಟ್ ಪಣಿಯಾಡಿ ಅವರು ಡಾl ಕಾಸರವಳ್ಳಿ ಕುರಿತ ಕವನ ವಾಚಿಸಿದರೆ, ಜೀವನ್ ಶೆಟ್ಟಿ ಅವರು ಗಿರೀಶ್ ಕಾಸರವಳ್ಳಿ ಚಿತ್ರ ಅರ್ಪಿಸಿದರು.
ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್ ಸ್ವಾಗತಿಸಿ, ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ನಾಗರಾಜ್ ಹೆಬ್ಬಾರ್ ಪ್ರಸ್ತಾವನೆಗೈದರು. ಶಿಲ್ಪಾ ಜೋಷಿ ನಿರೂಪಿಸಿ, ಗೀತಂ ಗಿರೀಶ್ ವಂದಿಸಿದರು. ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ಇದ್ದರು.
ಇದೇ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ವಿಶ್ವನಾಥ ಶೆಣೈ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ನಂತರ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಕಲಾವಿದರಿಂದ ಜೀವನ್ ರಾಂ ಸುಳ್ಯ ನಿರ್ದೇಶನದ ಮಕ್ಕಳ ಮಾಯಾಲೋಕ ನಾಟಕ ಪ್ರದರ್ಶನಗೊಂಡಿತು