ಸುದ್ದಿಕಿರಣ ವರದಿ
ಬುಧವಾರ, ಜುಲೈ 13
ಅತಿವೃಷ್ಟಿ ಹಾನಿಗೆ ತುರ್ತಾಗಿ ಪರಿಹಾರ ಒದಗಿಸಲು ಮುಂದಾಗಿ: ಸಿಎಂ ಸೂಚನೆ
ಉಡುಪಿ: ಸಾಮಾನ್ಯವಾಗಿ ಪ್ರತಿವರ್ಷವೂ ಮಳೆಯಿಂದ ಹಾನಿ ಒಂದೇ ಪ್ರದೇಶದಲ್ಲಿ ಸಂಭವಿಸುವುದು ಸರ್ವೇಸಾಮಾನ್ಯವಾಗಿದ್ದು, ಅವುಗಳಿಗೆ ಶಾಶ್ವತ ಪರಿಹಾರ ಒದಗಿಸುವ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮಳೆಹಾನಿಗೆ ಸಂಬಂಧಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಮಳೆ ಹಾನಿ ಕುರಿತ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವರ್ಷ ಪ್ರವಾಹ ಹಾಗೂ ಕಡಲ್ಕೊರೆತಕ್ಕೆ ಒಳಪಡುವ ಪ್ರದೇಶಗಳಲ್ಲಿ ಪರ್ಮನೆಂಟ್ ಫ್ಲಡ್ ಮಾನೇಜ್ ಮೆಂಟ್ ಟಾಸ್ಕ್ ಫೋರ್ಸ್ ಸಮಿತಿ ರಚಿಸಿಕೊಂಡು ಪ್ರವಾಹ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಅದಕ್ಕಾಗಿ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಸಂಬಂಧಿಕರಿಗೂ ಕಿಟ್
ಪ್ರಸ್ತುತ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ರೈತರು ಹಾಗೂ ಬಡಜನರಿಗೆ ಪರಿಹಾರ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಶೀಘ್ರವಾಗಿ ತಲುಪಿಸಲು ಕಾರ್ಯಪ್ರವೃತ್ತರಾಗಿ, ಕ್ರಮ ವಹಿಸಬೇಕು.
ಸಂತ್ರಸ್ತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಪತ್ತು ಪರಿಹಾರ ಮೊತ್ತ ಸೇರಿಸಿ ಪರಿಹಾರ ನೀಡಬೇಕು.
ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರು ಅಲ್ಲಿ ಇರುವ ವರೆಗೂ ಸರ್ಕಾರದ ನಿಯಮಾವಳಿ ಪ್ರಕಾರ ದೈನಂದಿನ ಅಗತ್ಯತೆಗಳನ್ನು ಪೂರೈಸಬೇಕು. ಆಹಾರದ ಜೊತೆಗೆ ಮೊಟ್ಟೆ ನೀಡಬೇಕು. ನಿರಾಶ್ರಿತರು ಒಂದೊಮ್ಮೆ ಕಾಳಜಿ ಕೇಂದ್ರಗಳಿಗೆ ಹೋಗದೇ ತಮ್ಮ ಸಂಬಂಧಿಗಳ ಮನೆಯಲ್ಲಿದ್ದರೂ ಆಹಾರದ ಕಿಟ್
ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಅನುಷ್ಠಾನವಾಗದ ಯೋಜನೆ
ಸಾಮಾನ್ಯವಾಗಿ ಮಳೆಯಿಂದಾಗಿ ಮನೆಹಾನಿ, ಗುಡ್ಡ ಕುಸಿತ, ಮೂಲಭೂತ ಸೌಕರ್ಯಗಳ ಹಾನಿಗಳುಂಟಾಗುತ್ತವೆ. ಆ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದ ಸಿಎಂ, ಕಳೆದ 3 ವರ್ಷದಿಂದ ಹೆಚ್ಚಿನ ಮಳೆಯಿಂದಾಗಿ ಮನೆ ಕಳೆದುಕೊಂಡವವರಿಗೆ ನೂತನ ವಸತಿ ನಿರ್ಮಾಣಕ್ಕೆ ರಾಜೀವ ಗಾಂಧಿ ವಸತಿ ನಿಗಮ ವತಿಯಿಂಧ ನೀಡುವ ಸೌಲಭ್ಯವನ್ನು ಸಮರ್ಪಕವಾಗಿ ಅನುಷ್ಠಾನವಾಗದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು ಹಾಗೂ ಕಿರಿಯ ಇಂಜಿನಿಯರ್ ಗಳು ನಿಗದಿತ ಕಾಲಾವಧಿಯೊಳಗೆ ಸರಿಯಾದ ವರದಿ ನೀಡದಿರುವುದು ಅದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರವಹಿಸಬೇಕು. ಗ್ರಾಮೀಣಾಭಿವೃಧ್ದಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದರು.
ಗದ್ದೆಗಳಲ್ಲಿ ನೀರು ತುಂಬಿಕೊಂಡು ಹಾನಿಗೊಳಗಾಗಿರುವ ಬೆಳೆ ಹಾನಿ ಸಮೀಕ್ಷೆಯನ್ನು ಮುಂದಿನ 2 ದಿನಗಳೊಳಗಾಗಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿಯನ್ನು 10 ದಿನಗಳೊಳಗಾಗಿ ಅಂದಾಜಿಸಿ ಪರಿಹಾರ ನೀಡುವ ಕೆಲಸವಾಗಬೇಕು ಎಂದರು.
ಅಧಿಕಾರಿಗಳಿಗೆ ಸೂಚನೆ
ಮಳೆ ಗಾಳಿಯಿಂದಾಗಿ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರಂಗಳು, ವಿದ್ಯುತ್ ಲೈನ್ ಗಳು ಹಾಳಾಗುವುದು ನಿರೀಕ್ಷಿತವಾಗಿದ್ದು, ಅವುಗಳ ದಾಸ್ತಾನು ಇಟ್ಟುಕೊಂಡು ಪುನರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ 2 ದಿನಗಳೊಳಗಾಗಿ ಕೈಗೊಂಡು ವಿದ್ಯುಚ್ಛಕ್ತಿ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವಂತೆ ಮೆಸ್ಕಾಂ ಆಧಿಕಾರಿಗಳಿಗೆ ಸೂಚನೆ ನೀಡಿದರು.
ಪಶ್ಚಿಮ ಘಟ್ಟಗಳಿಂದ ನೀರು ರಭಸವಾಗಿ ನದಿಯಲ್ಲಿ ಹರಿದು ಬರುವಾಗ ಮರದ ದಿಮ್ಮಿಗಳನ್ನು ಹೊತ್ತು ತಂದು ಕಿಂಡಿ ಅಣೆಕಟ್ಟುಗಳಿಗೆ ಅಡ್ಡಲಾಗಿ ನಿಂತು ನದಿ ನೀರು ಸರಾಗವಾಗಿ ಹರಿದು ಹೋಗದೇ ಕೃತಕ ನೆರೆ ಉಂಟಾಗಿ ಹತ್ತಿರದ ಗ್ರಾಮಗಳಿಗೆ ಮತ್ತು ರೈತರ ಹೊಲ ಗದ್ದೆಗಳಿಗೆ ತೊಂದರೆ ಉಂಟುಮಾಡುತ್ತವೆ. ಹಾಗಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಸೂಚಿಸಿದರು.
ತುರ್ತು ಸಂದರ್ಭದಲ್ಲಿ ಜನಸಾಮಾನ್ಯರ ರಕ್ಷಣೆಗೆ ಸ್ಪಂದಿಸುವ ಸ್ವಯಂಸೇವಕರಿಗೆ ಅಪ್ತಮಿತ್ರ ಯೋಜನೆಯಡಿ ತರಬೇತಿ ಕಲ್ಪಿಸಿ, ಸುರಕ್ಷಾ ಸಾಧನಗಳ ಕಿಟ್ ವಿತರಿಸಬೇಕು. ಅವರ ಸುರಕ್ಷತೆಗೆ 5 ಲಕ್ಷ ರೂ. ವರೆಗಿನ ಜೀವವಿಮೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಪ್ರಾಕೃತಿಕ ವಿಕೋಪದಲ್ಲಿ ಸಣ್ಣ ಪ್ರಮಾಣದ ಹಾನಿಗಳನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಕೈಗೊಂಡರೆ, ದೊಡ್ಡ ಪ್ರಮಾಣದ ಹಾನಿಗಳ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಕೋರಿ ಸರ್ಕಾರಕ್ಕೆ ಸಲ್ಲಿಸಿದ್ದಲ್ಲಿ ಪರಿಹರಿಸಲು ಸ್ಪಂದಿಸುವುದಾಗಿ ತಿಳಿಸಿದರು.
ಜಲ ವಲಯ ವ್ಯಾಪ್ತಿ ನಿಗದಿ
ಜಲ ವಲಯಗಳ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಮನೆ ನಿರ್ಮಿಸಿ, ಹಾನಿಗೊಳಗಾದ ಸಂದರ್ಭದಲ್ಲಿ ಪರಿಹಾರ ಒದಗಿಸಲು ಸಾಧ್ಯವಿಲ್ಲ ಎಂದು ಉನ್ನತ ನ್ಯಾಯಾಲಯದ ಆದೇಶಗಳು ಸ್ಪಷ್ಟಪಡಿಸಿವೆ.
ಜಲ ವಲಯಗಳ ವ್ಯಾಪ್ತಿಯನ್ನು ಗುರುತಿಸುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ನಿಗದಿಪಡಿಸಲಾಗುವುದು ಎಂದರು.
ಕರಾವಳಿ ಭಾಗದಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಹೆದ್ದಾರಿ, ರಕ್ಷಣಾ ಇಲಾಖೆ ಕಾಮಗಾರಿಗಳಿಂದ ಜನಸಾಮಾನ್ಯರ ದೈನಂದಿನ ಕಾರ್ಯಗಳಿಗೆ ಹೆಚ್ಚಿನ ಅನನುಕೂಲಗಳುಂಟಾಗುತ್ತಿರುವ ಬಗ್ಗೆ ದೂರುಗಳಿವೆ. ಅವುಗಳನ್ನು ಬಗೆಹರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ, ಸಮಸ್ಯೆ ಸರಿಪಡಿಸಬೇಕು ಎಂದರು.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ವಸತಿಗಳು ಮಳೆಯಿಂದ ಹಾನಿಗೊಳಗಾದಲ್ಲಿ ಅವರಿಗೆ ಪರಿಹಾರ ಒದಗಿಸಬೇಕೆಂಬ ಆದೇಶ ಈಗಾಗಲೇ ಹೊರಡಿಸಲಾಗಿದೆ. ಅದನ್ನು ಅಧಿಕಾರಿಗಳು ಪಾಲನೆ ಮಾಡಬೇಕು.
ಸರ್ಕಾರ ಬದ್ಧ
ಕರಾವಳಿ ಜಿಲ್ಲೆಗಳಲ್ಲಿ ಕಡಲ ಕೊರೆತಗಳು ಪ್ರತೀ ಮಳೆಗಾಲದಲ್ಲಿಯೂ ಉಂಟಾಗುವುದು ಸಾಮಾನ್ಯವಾಗಿದ್ದು, ಅದರ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸುವುದು ಅಗತ್ಯ. ಈ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದ್ದು, ತಜ್ಞರ ಸಲಹೆ ಆಧರಿಸಿ ಇತರ ಮೂಲಗಳಿಂದ ಅನುದಾನ ಪಡೆದು ಅನುಷ್ಠಾನಗೊಳಿಸಲಾಗುವುದು.
ಪ್ರಸ್ತುತ ಕೈಗೊಂಡಿರುವ ತಾತ್ಕಾಲಿಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಇಲಾಖೆ ಸಚಿವ ಸಿ. ಸಿ ಪಾಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಸಕರು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಇದ್ದರು.