Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ತೌಕ್ತೆ ಪರಿಣಾಮ ವ್ಯಾಪಕ ಮಳೆ; ಕಡಲು ರೌದ್ರಾವತಾರ

ತೌಕ್ತೆ ಪರಿಣಾಮ ವ್ಯಾಪಕ ಮಳೆ; ಕಡಲು ರೌದ್ರಾವತಾರ

ಉಡುಪಿ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತ ಪರಿಣಾಮ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದೆ. ಕಳೆದ ರಾತ್ರಿಯಿಂದಲೇ ಶುರುವಾರ ಗಾಳಿ, ಗುಡುಗು, ಮಿಂಚು ಸಹಿತ ಮಳೆ ಕೆಲವೆಡೆ ಅಪಾರ ಹಾನಿಯನ್ನುಂಟುಮಾಡಿದೆ.

ಚಂಡಮಾರುತ ಪರಿಣಾಮ ಅರಬ್ಬೀ ಸಮುದ್ರ ರೌದ್ರಾವತಾರ ತಾಳಿದೆ. ಜಿಲ್ಲೆಯ ಕುಂದಾಪುರ, ಬೈಂದೂರು, ಉಡುಪಿ, ಕಾಪು ಮೊದಲಾದೆಡೆಗಳಲ್ಲಿ ಸಮುದ್ರ ಕೊರೆತ ಶುರುವಾಗಿದೆ.

ಮೇಲ್ಮೈ ಸುಳಿಗಾಳಿಯಿಂದಾಗಿ ಅಬ್ಬರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿವೆ.

ಮಲ್ಪೆ ಪಡುಕರೆಯ ಸಮುದ್ರ ಕಿನಾರೆಯಲ್ಲಿ ನಿರ್ಮಾಣದ ಹಂತದಲ್ಲಿದ್ದ ಗೆಸ್ಟ್ ಹೌಸ್ ಕಡಲಿನಬ್ಬರಕ್ಕೆ ಸಮುದ್ರ ಪಾಲಾಗಿದೆ. ಹಲವು ತೆಂಗಿನ ಮರಗಳು ಕಡಲ ಒಡಲು ಸೇರಿವೆ. ಲಂಗರು ಹಾಕಿದ್ದ ಮೀನಿಗಾರಿಕೆ ದೋಣಿಗಳಿಗೆ ಹಾನಿಯುಂಟಾಗಿದೆ. ಸಮುದ್ರ ನೀರು ರಸ್ತೆಗೆ ಅಪ್ಪಳಿಸುತ್ತಿದ್ದು, ನೀರು ರಸ್ತೆ ದಾಟಿ ತೆಂಗಿನ ತೋಟದ ಮೂಲಕ ಮತ್ತೆ ನದಿ ಸೇರುತ್ತಿದೆ.

ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್ ಸಮೀಪವೂ ಕಡಲು ಕೊರೆತ ಆರಂಭವಾಗಿದೆ.

ಚಂಡಮಾರುತದ ಭೀತಿಯಿಂದಾಗಿ ಮೀನುಗಾರರು ತಮ್ಮ ಮೀನುಗಾರಿಕೆ ದೋಣಿಗಳನ್ನು ಕ್ರೈನ್ ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಕಡಲ್ಕೊರೆತ ತಡೆಯಲು ಹಾಕಿದ ಕಲ್ಲು ಸಮುದ್ರಪಾಲಾಗಿವೆ.

ಶಾಸಕ, ಸಂಸದೆ ಭೇಟಿ
ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕಾಪು ಶಾಸಕ ಲಾಲಾಜಿ ಮೆಂಡನ್ ಭೇಟಿ ನೀಡಿದರು. ವಿವಿಧ ಜನಪ್ರತಿನಿಧಿಗಳು ಇದ್ದರು.

ತಕ್ಷಣ ಪರಿಹಾರೋಪಾಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸೂಚನೆ
ಕೊರನಾ ಗಂಡಾಂತರದ ನಡುವೆ ತೌಕ್ತೆ ಚಂಡಮಾರುತ ಆತಂಕ ಸೃಷ್ಟಿಸಿದೆ. ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ ಸೂಚನೆ ನೀಡಿದ್ದಾರೆ.

ಪ್ರಾಕೃತಿಕ ವಿಕೋಪ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!