Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ದನ ಸಾಕಣೆ ಪೂರ್ವಾನುಮತಿಗೆ ವಿರೋಧ

ದನ ಸಾಕಣೆ ಪೂರ್ವಾನುಮತಿಗೆ ವಿರೋಧ

ಉಡುಪಿ: ಹಸಿರು ಪೀಠ ನಿರ್ದೇಶನದ ಮೇರೆಗೆ ಪರಿಸರ ಇಲಾಖೆಯ ಸೂಚನೆಯಂತೆ ಇನ್ನು ಮುಂದೆ, ದನ ಸಾಕುವವರು ಪೂರ್ವಾನುಮತಿ ಪಡೆಯಬೇಕೆಂದು ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಕೃಷಿಕರೂ ಸೇರಿದಂತೆ ಎಲ್ಲ ಸಹಕಾರಿಗಳೂ ಒಕ್ಕೊರಳಿನಿಂದ ವಿರೋಧಿಸಬೇಕು ಎಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಇಲ್ಲಿನ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆದ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಸಹಕಾರ ಸಂಘಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟಲೈಸೇಶನ್ ಮತ್ತು ಸಾಮಾಜಿಕ ಜಾಲತಾಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಸದೃಢವಾಗಿದೆ. ಇಲ್ಲಿನ ಪ್ರಮುಖ ಸಹಕಾರಿ ಸಂಸ್ಥೆಗಳಾದ ಕೇಂದ್ರ ಸಹಕಾರ ಬ್ಯಾಂಕ್, ಕ್ಯಾಂಪ್ಕೊ ಮತ್ತು. ದ.ಕ. ಹಾಲು ಉತ್ಪಾದಕರ ಒಕ್ಕೂಟ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆ ಕಾರಣದಿಂದಾಗಿ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಲ್ಲ ಎಂದರು.
ಕೊರೊನಾ ದಿನಗಳಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಮತ್ತು ಕ್ಯಾಂಪ್ಕೊ ಲಾಭದಾಯವಾಗಿ ನಡೆದಿದ್ದರೂ ಹಾಲು ಉತ್ಪಾದಕರ ಒಕ್ಕೂಟ ಮಾತ್ರ ನಷ್ಟ ಅನುಭವಿಸಿದೆ. ಹೈನುಗಾರರಿಂದ ಖರೀದಿಸುವ ಹಾಲಿನ ಪೈಕಿ ಸಾಕಷ್ಟು ಪ್ರಮಾಣದಲ್ಲಿ ವಿಕ್ರಯವಾಗದೇ ದಿನವಹಿ ಸುಮಾರು 60 ಸಾವಿರ ಲೀ. ಹಾಲು ಉಳಿಕೆಯಾಗುವ ಕಾರಣದಿಂದಾಗಿ ಸಂಸ್ಥೆ ನಷ್ಟ ಅನುಭವಿಸುವಂತಾಗಿದೆ. ಆದರೂ ಇತರ ಘಟಕಗಳಿಗೆ ಹೋಲಿಸಿದಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂಟ ಹೈನುಗಾರರಿಗೆ ನೀಡುವ ಹಾಲಿನ ದರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಹಾಗಾಗಿ ರಾಜ್ಯದಲ್ಲೇ ಹಾಲು ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಮಂಗಳೂರು ಘಟಕ ಪ್ರಥಮ ಸ್ಥಾನದಲ್ಲಿದೆ ಎಂದರು.
ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಸಹಕಾರಿ ವ್ಯವಸ್ಥೆ ಇದೀಗ ಸುಫಲಾ ಉತ್ಪಾದನೆಯನ್ನು ಆರಂಭಿಸಲಿದೆ. ಆರೋಗ್ಯ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಲು ಪೂರಕವಾಗಿ ಪ್ರಧಾನ ಮಂತ್ರಿ ಜನೌಷಧ ಮಳಿಗೆ ಆರಂಭಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ, ಡಿಜಿಟಲೈಸೇಶನ್ ನ್ನು ತಮ್ಮ ಒಕ್ಕೂಟ ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿದ್ದು, ಕ್ಲೌಡ್ ತಂತ್ರಜ್ಞಾನ ಮೂಲಕ ಎಲ್ಲ ನಂದಿನಿ ಡೀಲರ್ ಗಳು ಮೊಬೈಲ್ ಆ್ಯಪ್ ಮೂಲಕ ಉತ್ಪನ್ನಗಳ ಬೇಡಿಕೆ ಸಲ್ಲಿಸಲು ಸಾಧ್ಯವಾಗಿದೆ. ಕಾಮನ್ ಸಾಫ್ಟ್ ವೇರ್ ಅಳವಡಿಸುವ ಮೂಲಕ ಹೈನುಗಾರರಿಗೆ ಮಾಹಿತಿ ನೀಡಲುದ್ದೇಶಿಸಲಾಗಿದೆ ಎಂದರು.
ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಡಾ| ದೇವಿಪ್ರಸಾದ ಶೆಟ್ಟಿ, ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕರಾದ ಕೆ. ಪಿ. ಸುಚರಿತ ಶೆಟ್ಟಿ, ಸಾಣೂರು ನರಸಿಂಹ ಕಾಮತ್, ಸುಧಾಕರ ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ ಮೊದಲಾದವರಿದ್ದರು.
ಉತ್ತಮ ಡೀಲರ್ ಗಳನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಡೀಲರ್ ಗಳ ಪ್ರತಿಭಾನ್ವಿತ ಮಕ್ಕಳನ್ನು ಹಾಲು ಉತ್ಪಾದಕರ ಒಕ್ಕೂಟ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಗೌರವಿಸಿದರು.
ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಡಾ| ಎಸ್. ಟಿ. ಸುರೇಶ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ್ ನಿರೂಪಿಸಿದರು.

ನಂದಿನಿ ಆನ್ ವ್ಹೀಲ್ಸ್
ಇದೇ ಸಂದರ್ಭದಲ್ಲಿ `ನಂದಿನಿ ಆನ್ ವ್ಹೀಲ್ಸ್’ ವಾಹನಕ್ಕೆ ಡಾ| ಎಂ. ಎನ್. ರಾಜೇಂದ್ರಕುಮಾರ್ ಚಾಲನೆ ನೀಡಿದರು. ಉಡುಪಿ ಮತ್ತು ದ. ಕ. ಜಿಲ್ಲೆಗಳಲ್ಲಿ ತಲಾ ಒಂದೊಂದು ವಾಹನ ಪ್ರತೀ ಹಳ್ಳಿಗಳಿಗೆ ಚಲಿಸಲಿದ್ದು, ನಂದಿನಿಯ ಎಲ್ಲ ಉತ್ಪನ್ನಗಳೂ ಗ್ರಾಹಕರ ಮನೆ ಬಾಗಿಲಿಗೆ ತಲುಪಲಿವೆ. ಜಾತ್ರೆ ಇತ್ಯಾದಿ ದೊಡ್ಡ ಸಮಾರಂಭಗಳಲ್ಲಿ ನಂದಿನಿ ಉತ್ಪನ್ನಗಳ ಪ್ರಚಾರ ವಾಹನವನ್ನಾಗಿಯೂ ಅದನ್ನು ಬಳಸಲಾಗುವುದು ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!