ದೌರ್ಬಲ್ಯ ತೊರೆಯದಿದ್ದಲ್ಲಿ ಧರ್ಮ ಕೈಹಿಡಿಯದು
ಉಡುಪಿ, ಡಿ. 24 (ಸುದ್ದಿಕಿರಣ ವರದಿ): ಕ್ಷುದ್ರವಾದ ಹೃದಯ ದೌರ್ಬಲ್ಯವನ್ನು ನಾವು ತೊರೆಯದಿದ್ದರೆ ನಮ್ಮ ಧರ್ಮ ನಮ್ಮ ಕೈ ಹಿಡಿಯುವುದಿಲ್ಲ ಎಂದು ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಶ್ರೀಕೃಷ್ಣ ಮಠ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆದ ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಉತ್ಸವದ 20ನೇ ದಿನದ ಕಾರ್ಯಕ್ರಮ ಶುಕ್ರವಾರ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಒಳ್ಳೆಯ ಹಣತೆ ಒಳ್ಳೆಯ ತೈಲ ಮತ್ತು ಚೆನ್ನಾಗಿ ಉರಿಯುವ ಬತ್ತಿ ಇದ್ದಾಗಲಷ್ಟೇ ಬೆಳಕು ಪ್ರಜ್ವಲಿಸುತ್ತದೆ ಎಂದರು.
ಅರ್ಜುನನನ್ನು ನೆಪವಾಗಿಸಿಕೊಂಡು ಶ್ರೀಕೃಷ್ಣ ಗೀತೆಯನ್ನು ಉಪದೇಶಿಸಿದ. ಗೀತೆ ವಿಶ್ವಮಾನ್ಯ ಕೃತಿ ಎಂದರು.
ಜ್ಞಾನವೇ ಸಂಪತ್ತು
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಜ್ಞಾನವೇ ಮನುಷ್ಯನಿಗೆ ಪ್ರಧಾನ ಸಂಪತ್ತು. ಜ್ಞಾನವಿದ್ದಾಗ ಸಮಾಧಾನವಿರುತ್ತದೆ. ಸಮಾಧಾನವೇ ಸಾಧನೆಯ ಮೂಲ ಸ್ರೋತಸ್ಸು. ವೈವಿಧ್ಯ ಎನ್ನುವುದು ಮನುಷ್ಯನ ಬದುಕಿಗೆ ಅರ್ಥ ತಂದುಕೊಡುತ್ತದೆ. ಭಾಷೆ, ಮತ, ಸಂಸ್ಕೃತಿ, ಸಂಪ್ರದಾಯಗಳ ವೈವಿಧ್ಯವೇ ಈ ದೇಶದ ಏಕತೆಯ ಪ್ರಧಾನ ಶಕ್ತಿ ಎಂದರು.
ಉಪನ್ಯಾಸ
ಭಾರತ ಸರಕಾರದ ಶಿಕ್ಷಣ ಮಂತ್ರಾಲಯದ ಭಾರತೀಯ ಭಾಷೆಗಳ ಉಚ್ಛ ಮಟ್ಟದ ಸಲಹಾ ಸಮಿತಿ ಅಧ್ಯಕ್ಷ ಚ.ಮೂ. ಕೃಷ್ಣಶಾಸ್ತ್ರಿ ಭಾರತೀಯ ಭಾಷೆಗಳು, ಭಾರತೀಯ ಜ್ಞಾನಪರಂಪರೆ ಮತ್ತು ಭಾರತದ ಭವಿಷ್ಯ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಅಭ್ಯಾಗತರಾಗಿದ್ದರು.
ಸನ್ಮಾನ
ಈ ಸಂದರ್ಭದಲ್ಲಿ ನಿವೃತ್ತ ಯೋಧ ಪೆರಂಪಳ್ಳಿ ನೆಕ್ಕಾರು ಶ್ರೀನಿವಾಸ ರಾವ್, ರಥ ಮತ್ತು ಚಿನ್ನದ ಕುಸುರಿ ಶಿಲ್ಪಿ ಕುಂಜಾರುಗಿರಿ ರಾಘವೇಂದ್ರ ಆಚಾರ್ಯ ಅವರನ್ನು ಶ್ರೀಪಾದರು ಸನ್ಮಾನಿಸಿದರು.
ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಟೀಲು ಹರಿನಾರಾಯಣದಾಸ ಆಸ್ರಣ್ಣ ಮತ್ತು ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಸಹಕಾರದೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆಯ್ದ ಕಲಾವಿದರಿಂದ ಮಹಾಬ್ರಾಹ್ಮಣ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.