Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಧರ್ಮ ಜಾಗತಿಕ ಮತ್ತು ಸಾರ್ವತ್ರಿಕ

ಧರ್ಮ ಜಾಗತಿಕ ಮತ್ತು ಸಾರ್ವತ್ರಿಕ

ಧರ್ಮ ಜಾಗತಿಕ ಮತ್ತು ಸಾರ್ವತ್ರಿಕ

ಉಡುಪಿ: ಧರ್ಮ ಜಾಗತಿಕ ಮತ್ತು ಸಾರ್ವತ್ರಿಕವಾಗಿದ್ದು, ನಾಲಿಗೆಯಲ್ಲಿ ಸತ್ಯ, ಕಣ್ಣಿನಲ್ಲಿ ದಯೆ ಮತ್ತು ಹೃದಯದಲ್ಲಿ ಪ್ರೀತಿ ಭಕ್ತಿ ಮತ್ತು ವಾತ್ಸಲ್ಯಗಳೆಂಬ ಪ್ರಸಾಧನಗಳನ್ನು ಬಳಸಿ ಜೀವನದಲ್ಲಿ ಸುಂದರವಾಗಿ ಕಾಣಬೇಕು ಎಂದು ಚಿತ್ರದುರ್ಗ ಸಿರಿಗೆರೆ ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಉತ್ಸವದ 13ನೇ ದಿನದ ಕಾರ್ಯಕ್ರಮ ಶುಕ್ರವಾರ ಭಾಗವಹಿಸಿ ಮಾತನಾಡಿದರು.

ಆಧ್ಯಾತ್ಮಿಕ ಜೀವನದಲ್ಲಿ ದೇವರ ಮೇಲಿರುವ ಪ್ರೀತಿಯೇ ನಿಜವಾದ ಭಕ್ತಿ. ಅದು ಲೌಕಿಕ ಜೀವನದಲ್ಲಿರುವಂತೆ ತಾತ್ಕಾಲಿಕ ಅಲ್ಲ, ನಿರಂತರವಾಗಿರುವಂಥದು ಎಂದರು.

ತಾರತಮ್ಯ ಮತಾಂತರಕ್ಕೆ ಕಾರಣ
ಅಭ್ಯಾಗತರಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹ ಎನ್. ತಿಪ್ಪೇಸ್ವಾಮಿ, ನಮ್ಮ ದೇಶದಲ್ಲಿ ಸ್ವಾತಂತ್ರ್ಯದ 75 ವರ್ಷದ ಬಳಿಕವೂ ಅಸ್ತಿತ್ವದಲ್ಲಿರುವ ಸಾಮಾಜಿಕ ತಾರತಮ್ಯವೇ ಮತಾಂತರಕ್ಕೆ ಕಾರಣ.

ತಾರತಮ್ಯ ತೊಡೆದುಹಾಕಲು ಆಂದೋಲನದ ರೀತಿಯಲ್ಲಿ ಕೆಲಸಗಳಾಗಬೇಕು ಎಂದರು.

ಭಗವಂತನ ಕುರಿತ ಜ್ಞಾನವೇ ಭಕ್ತಿ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಭಗವಂತನ ಕುರಿತ ಜ್ಞಾನವೇ ಭಕ್ತಿ ಎಂದರು.

ದೇವರು ಎಲ್ಲವನ್ನೂ ತಿಳಿದವನು, ಆತನೇ ದೊಡ್ಡವನು, ಎಲ್ಲಕ್ಕೂ ಶಕ್ತನಾದವನು ಎನ್ನುವ ಮಹಾತ್ಮೆಯ ಜ್ಞಾನವನ್ನು ಭಕ್ತಿ ಎಂದು ಕರೆಯಲ್ಪಡುತ್ತದೆ. ಅದು ನಿರಂತರವಾಗಿರಬೇಕು ಎಂದರು.

ಸನ್ಮಾನ
ಈ ಸಂದರ್ಭದಲ್ಲಿ ಸಾಹಿತಿ ಕನರಾಡಿ ವಾದಿರಾಜ ಸರಳಾಯ ಮತ್ತು ರಿಕ್ಷಾ ಚಾಲಕರಾದ ಬಾಬು ಜತ್ತನ್ ಅವರನ್ನು ಶ್ರೀಪಾದರು ಸನ್ಮಾನಿಸಿದರು.

ದಂಡತೀರ್ಥ ಡಾ. ಸೀತಾರಾಮ ಭಟ್ ಇದ್ದರು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಚೆನ್ನೈ ನ ರಾಮಕೃಷ್ಣನ್ ಮೂರ್ತಿ ಅವರಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!