Sunday, July 3, 2022
Home ಸಮಾಚಾರ ರಾಜ್ಯ ವಾರ್ತೆ ಧಾರ್ಮಿಕ ಕೇಂದ್ರಗಳನ್ನು ಬಿಟ್ಟುಕೊಡಿ

ಧಾರ್ಮಿಕ ಕೇಂದ್ರಗಳನ್ನು ಬಿಟ್ಟುಕೊಡಿ

ಸುದ್ದಿಕಿರಣ ವರದಿ
ಸೋಮವಾರ, ಮೇ 16

ಧಾರ್ಮಿಕ ಕೇಂದ್ರಗಳನ್ನು ಬಿಟ್ಟುಕೊಡಿ
ಉಡುಪಿ: ಯಾವುದೋ ಕಾರಣದಿಂದಾಗಿ ಯಾವುದೋ ಕಾಲದಲ್ಲಿ ಹಿಂದೂ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿದ್ದು, ಅವುಗಳನ್ನು ಹಿಂದೂಗಳಿಗೆ ಬಿಟ್ಟುಕೊಡಿ, ಹಿಂದೂ ಕೇಂದ್ರಗಳು ದರ್ಗಾಗಳಾಗಿದ್ದಲ್ಲಿ ಮುಸ್ಲಿಮರಿಗೆ ಬಿಡಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಿಂದೂ ಮುಸ್ಲಿಮರಿಗೆ ಕಿವಿಮಾತು ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯವನ್ನು ಖರೀದಿಸಿ ಮಸೀದಿಯಾಗಿ ಪರಿವರ್ತಿಸಿದ್ದರೆ ನಮ್ಮ ಆಕ್ಷೇಪ ಇಲ್ಲ. ಯಾವುದೇ ಪೂಜಾ ಸ್ಥಳವಾಗಿದ್ದರೂ ಒಂದು ಸಮಾಜದವರು ಖರೀದಿಸಿ ಮಾರ್ಪಾಡು ಮಾಡಿದ್ದರೂ ಸಮಸ್ಯೆ ಇಲ್ಲ.

ಆದರೆ, ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದುದು ಅನಿವಾರ್ಯ. ಈಗ ಆಗುತ್ತಿರುವ ಇಂಥ ಬೆಳವಣಿಗೆಯನ್ನು ನಾವು ಸ್ವಾಗತಿಸುವುದಾಗಿ ಪೇಜಾವರ ಶ್ರೀಪಾದರು ಹೇಳಿದರು.

ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪರಿಪಾಲಿಸಲೇಬೇಕು. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ನಾವು ನಡೆಯುವುದು ಸೂಕ್ತ. ಸಂಘರ್ಷಕ್ಕೆ ಇಳಿಯದೆ ಸೌಹಾರ್ದದಿಂದ ಪರಸ್ಪರ ಬಿಟ್ಟುಕೊಡಬೇಕು. ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದರು.

ಧ್ವನಿವರ್ಧಕ ಬಗ್ಗೆ ಉತ್ತರಿಸಿದ ಶ್ರೀಗಳು ಸುಪ್ರೀಂ ಕೋರ್ಟ್ ಧ್ವನಿವರ್ಧಕ ಬಳಕೆ ಕುರಿತು ಮಾರ್ಗದರ್ಶನ ಮಾಡಿದೆ. ಎಲ್ಲರೂ ಈ ನಿಯಮ ಪಾಲಿಸಬೇಕು ಎಂದು ಹಿಂದೂ ಸಮಾಜಕ್ಕೆ ಕರೆ ಕೊಡುತ್ತೇನೆ.

ವಿಶೇಷ ದಿನ, ವಿಶೇಷ ಆಚರಣೆ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಸೋಣ ಎಂದೂ ಸಲಹೆ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!