Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಧಾರ್ಮಿಕ ತಾರತಮ್ಯ ಬಗೆಹರಿಯದಿದ್ದಲ್ಲಿ ಪ್ರತಿಭಟನೆ: ಕ್ಯಾಂಪಸ್ ಫ್ರಂಟ್ ಎಚ್ಚರಿಕೆ

ಧಾರ್ಮಿಕ ತಾರತಮ್ಯ ಬಗೆಹರಿಯದಿದ್ದಲ್ಲಿ ಪ್ರತಿಭಟನೆ: ಕ್ಯಾಂಪಸ್ ಫ್ರಂಟ್ ಎಚ್ಚರಿಕೆ

ಸುದ್ದಿಕಿರಣ ವರದಿ
ಶನಿವಾರ, ಜನವರಿ 1, 2022
ಧಾರ್ಮಿಕ ತಾರತಮ್ಯ ಬಗೆಹರಿಯದಿದ್ದಲ್ಲಿ ಪ್ರತಿಭಟನೆ: ಕ್ಯಾಂಪಸ್ ಫ್ರಂಟ್ ಎಚ್ಚರಿಕೆ

ಉಡುಪಿ: ಇಲ್ಲಿನ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧಾರ್ಮಿಕ ತಾರತಮ್ಯ ಬಗೆಹರಿಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಮಸೂದ್ ಮನ್ನ, ಆ ಕಾಲೇಜಿನಲ್ಲಿ ಹಿಂದಿನಿಂದಲೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿದ್ದರು. ಈ ಮೊದಲು ಹಿಜಾಬ್ ಧರಿಸಲು ವಿರೋಧ ಇತ್ತಾದರೂ ಇದೀಗ ತೀವ್ರವಾಗಿದೆ. ಹಿಜಾಬ್ ಧರಿಸಿದ ಕಾರಣಕ್ಕಾಗಿ 6 ಮಂದಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಲಾಗಿತ್ತು. ಈ ವರ್ತನೆ ಧಾರ್ಮಿಕ ತಾರತಮ್ಯವಾಗಿದ್ದು ಅದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಮುಸ್ಲಿಂ ಮಹಿಳೆ ಹಿಜಾಬ್ ಧರಿಸುವುದು ಆಕೆಯ ಧಾರ್ಮಿಕ ನಂಬಿಕೆ ಹಾಗೂ ಹಕ್ಕು. ಅದನ್ನು ಇದೀಗ ಕಸಿದುಕೊಳ್ಳಲಾಗುತ್ತಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದರು. ಆದರೆ, ಇದೀಗ ಕೆಲವು ಶಿಕ್ಷಕರು ಹಿಜಾಬ್ ಧರಿಸಲು ತಡೆಯೊಡ್ಡುತ್ತಿದ್ದಾರೆ ಹಾಗೂ ತರಗತಿಗೆ ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ. ಆ ವಿದ್ಯಾರ್ಥಿನಿಯರ ಪೋಷಕರು ಈ ಹಿಂದೆ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ, ಆ ಕುರಿತು ಮಾತನಾಡಲು ಸತತವಾಗಿ ಯತ್ನಿಸಿದರೂ ಪ್ರಾಂಶುಪಾಲರು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ಮನ್ನ ಆರೋಪಿಸಿದರು.

ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಡಿಡಿಪಿಯು ಅವರಿಗೆ ಮನವಿ ಮಾಡಿದ್ದು, ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಶುಕ್ರವಾರ ಮತ್ತೆ ಆ ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರಹಾಕಿದ್ದಾರೆ ಎಂದರು.

ಅಲ್ಲಿಯ ಪ್ರಾಂಶುಪಾಲರನ್ನು ವಜಾಗೊಳಿಸಬೇಕು. ಪ್ರಾಧ್ಯಾಪಕರು ಹಾಜರಾತಿ ನೀಡದ ಕಾರಣ ಅವರ ಮೇಲೂ ಕಠಿಣ ಕ್ರಮ ಜರುಗಿಸಬೇಕು. ಅಲ್ಲಿ ನಡೆಯುತ್ತಿರುವ ಧಾರ್ಮಿಕ ತಾರತಮ್ಯ ನಿಲ್ಲಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಮ್, ಜಿಲ್ಲಾ ಉಪಾಧ್ಯಕ್ಷೆ ಝಮ್ ಝಮ್, ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಇದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!