ಮಂಗಳೂರು: ಕೋವಿಡ್ ಸೋಂಕಿತರ ಆರೋಗ್ಯದ ಕುರಿತು ನಿಗಾ ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಕುರಿತು ಗಮನಹರಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬಂದರು ಆರೋಗ್ಯ ಕೇಂದ್ರದಲ್ಲಿ ಸಂಬಂಧಪಟ್ಟ ವಾರ್ಡ್ ಗಳ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕಾಗಿ ನಮ್ಮ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತಿದ್ದಾರೆ. ಸೋಂಕಿತರ ಆರೋಗ್ಯದ ಕುರಿತು ಕಾಳಜಿ ವಹಿಸುವ, ಮಾಹಿತಿ ಪಡೆಯುವ ಕೆಲಸ ಮಾಡುತಿದ್ದಾರೆ ಎಂದು ಶಾಸಕ ಕಾಮತ್ ಶ್ಲಾಘಿಸಿದರು.
ಅಲ್ಪ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ರೋಗ ಲಕ್ಷಣ ಕಂಡುಬಂದರೆ ಪರೀಕ್ಷೆಗೊಳಪಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಬೇಕು. ರೋಗ ಉಲ್ಬಣಗೊಂಡು ಪರಿಸ್ಥಿತಿ ಕೈಮೀರುವ ಹಂತದ ವರೆಗೂ ಕಾಯಬಾರದು ಹಾಗೂ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ಕಾಮತ್ ಹೇಳಿದರು.
ಕೋವಿಡ್ ಸೋಂಕು ಹರಡದಂತೆ ತಡೆಗಟ್ಟುವುದರೊಂದಿಗೆ ಡೆಂಗ್ಯೂ, ಮಲೇರಿಯಾ ಕುರಿತು ಗಮನ ನೀಡಬೇಕು. ಸೊಳ್ಳೆ ಪರದೆ ವಿತರಣೆ ಅಥವಾ ಇನ್ನಿತರ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಸಕ ವೇದವ್ಯಾಸ್ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಲೀಲಾವತಿ ಪ್ರಕಾಶ್, ಪಾಲಿಕೆ ಸದಸ್ಯರಾದ ಪೂರ್ಣಿಮಾ ಎಂ. ಮತ್ತು ಜಯಶ್ರೀ ಕುಡ್ವ, ಬಂದರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.