Monday, July 4, 2022
Home ಸಮಾಚಾರ ಉಡುಪಿ ನಗರಸಭೆ ಬಳಿ ಕೃತಕ ಜಲಾಶಯ!

ಉಡುಪಿ ನಗರಸಭೆ ಬಳಿ ಕೃತಕ ಜಲಾಶಯ!

ಉಡುಪಿ: ಇಲ್ಲಿನ ಕವಿ ಮುದ್ದಣ ಮಾರ್ಗದಲ್ಲಿ ನಗರಸಭೆ ಕಚೇರಿ ಎದುರು ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಹಾಜಿ ಅಬ್ದುಲ್ಲಾ ಹೆಂಗಸರು ಮತ್ತು ಮಕ್ಕಳ ಆಸ್ಪತ್ರೆಯನ್ನು ಅಭಿವೃದ್ಧಿ ಕಾರಣದಿಂದ ಕಳೆದ ಎರಡು ವರ್ಷದ ಹಿಂದೆ ನೆಲಸಮಗೊಳಿಸಲಾಗಿತ್ತು.

ಅದೇ ವಿಶಾಲವಾದ ಸ್ಥಳದಲ್ಲಿ ಪ್ರಸ್ತುತ ಸುಮಾರು 60 ಅಡಿ ಆಳದ ಗುಂಡಿ ತೋಡಲಾಗಿದೆ. ಗುಂಡಿಯಲ್ಲಿ ಮಳೆ ನೀರು ಮತ್ತು ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದೆ. ನೀರಿನ ಮಟ್ಟ 50 ಅಡಿ ಆಳದ ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಗುಂಡಿಯ ಅಂಚಿನ ಸುತ್ತಲೂ ಮಣ್ಣು ಕುಸಿಯದಂತೆ ತಡೆಯೊಡ್ಡಲು ಯಾವೊಂದು ರಕ್ಷಣೆಯ ನಿರ್ಮಾಣಗಳೂ ಅಲ್ಲಿಲ್ಲ. ಜೇಡಿ ಮಣ್ಣು ಮೆದುವಾಗಿರುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ. ಗುಂಡಿಯ ಅಂಚಿನ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣಗಳು, ಬಹುಮಹಡಿ ಕಟ್ಟಡ, ವಾಸದ ಮನೆಗಳಿವೆ. ಅಕಸ್ಮಾತ್ ಅತಿಯಾಗಿ ಮಳೆ ಸುರಿದು ನೀರಿನ ಮಟ್ಟ ಏರಿಕೆಯಾದಲ್ಲಿ ಭೂಕುಸಿತ ಸಂಭವಿಸಬಹುದು. ಅಕ್ಕಪಕ್ಕದ ಕಟ್ಟಡಗಳು ಉರುಳಿ ಬಿದ್ದು ದೊಡ್ಡ ಮಟ್ಟದ ದುರಂತ ಸಂಭವಿಸಲೂಬಹುದು.

ಸ್ಥಳದ ಸುತ್ತಲು ಎತ್ತರದ ವರೆಗೆ ತಗಡು ಶೀಟಿನ ತಡೆಬೇಲಿ ಹಾಕಿರುವುದರಿಂದ ಅಲ್ಲಿನ ಸಮಸ್ಯೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಅರಿವಿಗೆ ಬಾರದೆ ಅಜ್ಞಾತವಾಗಿದೆ. ಪರಿಸರದಲ್ಲಿ ಆತಂಕ ಮನೆಮಾಡಿದೆ.

ತುರ್ತಗಿ ಜಿಲ್ಲಾಡಳಿತ ಮತ್ತು ನಗರಸಭೆ ಅತ್ತ ಗಮನಹರಿಸಿ ಅಪಾಯ ಆಹ್ವಾನಿಸುವ ಆ ಸ್ಥಳವನ್ನು ಭೂ ವಿಜ್ಞಾನಿಗಳು ಭೂಗರ್ಭ ಶಾಸ್ತ್ರಜ್ಞರ ಮೂಲಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ತ್ತು ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!