ಸುದ್ದಿಕಿರಣ ವರದಿ
ಸೋಮವಾರ, ಮೇ 2
ನಾಟ್ಯ ಕಲೆಯ ಸೊಗಡು ಪಸರಿಸಲಿ
ಉಡುಪಿ: ಗುರು ಶಿಷ್ಯ ಪರಂಪರೆಯಲ್ಲಿ ಬಂದ ನಾಟ್ಯ ಕಲೆಯ ಸೊಗಡು ವಿಶ್ವದಾದ್ಯಂತ ಪಸರಿಸಲಿ ಎಂದು ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಆಶಿಸಿದರು.
ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಸರಸ್ವತಿನಗರ ಪ್ರಸ್ತುತಪಡಿಸಿದ ನೃತ್ಯ ಮಂಥನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭ್ರಾಮರೀ ನಾಟ್ಯಾಲಯದ ಗುರು ವಿದ್ವಾನ್ ಭವಾನಿಶಂಕರ ಅವರಿಂದ ಗುರುವಂದನೆ ಸ್ವೀಕರಿಸಿದ ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ವ್ಯವಸ್ಥಾಪಕಿ ಹಾಗೂ ನೃತ್ಯ ಗುರು ವಿದುಷಿ ವೀಣಾ ಎಂ. ಸಾಮಗ, ವಿಧೇಯತೆಯನ್ನು ಮೈಗೂಡಿಸಿಕೊಂಡು ಗುರು- ಶಿಷ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದ ಭವಾನಿಶಂಕರ ಹಾಗೂ ಅವರ ಶಿಷ್ಯರು ಅಭಿನಂದನಾರ್ಹರು ಎಂದರು.
ಅಭ್ಯಾಗತರಾಗಿದ್ದ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಪನ್ಯಾಸಕ ರಮಾನಂದ ರಾವ್, ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಶ್ರೀ ಭ್ರಾಮರೀ ನಾಟ್ಯಾಲಯದ ಗೌರವ ಅಧ್ಯಕ್ಷ ಕೆ. ಭಾಸ್ಕರ್ ಇದ್ದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೃದಂಗ ವಾದಕ ರಾಮಚಂದ್ರ ಪಾಂಗಣ್ಣಾಯ, ಪ್ರಸಾಧನ ಕಲಾವಿದ ರಮೇಶ್ ಪಣಿಯಾಡಿ, ರಂಗ ವಿನ್ಯಾಸಕ ರಾಜೇಶ್ ಬನ್ನಂಜೆ ಅವರನ್ನು ಗೌರವಿಸಲಾಯಿತು.
ಭ್ರಾಮರೀ ನಾಟ್ಯಾಲಯದ ನೃತ್ಯ ಗುರು ವಿದ್ವಾನ್ ಭವಾನಿಶಂಕರ ಸ್ವಾಗತಿಸಿದರು. ಯೋಗೀಶ್ ಕೊಳಲಗಿರಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ನಾಟ್ಯಾಲಯದ ವಿದ್ಯಾರ್ಥಿಗಳಿಗಳಿಂದ ಭರತನಾಟ್ಯ, ಕೂಚಿಪುಡಿ ಹಾಗೂ ಸಮೂಹ ನೃತ್ಯ ಹಾಗೂ ಜಾನಕಿ ಬ್ರಹ್ಮಾವರ ವಿರಚಿತ ವಿದ್ವಾನ್ ಕೆ. ಭವಾನಿಶಂಕರ್ ನಿರ್ದೇಶನದ ಬುದ್ಧ ತುಳು ನೃತ್ಯ ರೂಪಕ ಪ್ರಸ್ತುತಗೊಂಡಿತು.
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಉಸ್ತುವಾರಿ ಕುಸುಮ ನಾಗರಾಜ್, ಸದಾಶಿವ ಕೊಳಲಗಿರಿ ಹಾಗೂ ಸುಬ್ರಹ್ಮಣ್ಯ ಆಚಾರ್ ಸಹಕರಿಸಿದರು.
ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು