Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ನಿವಾರಣೆಯ ಹಾದಿಯಲ್ಲಿ ಶೀರೂರು ಮಠ ಆಡಳಿತಾತ್ಮಕ ತೊಡಕು

ನಿವಾರಣೆಯ ಹಾದಿಯಲ್ಲಿ ಶೀರೂರು ಮಠ ಆಡಳಿತಾತ್ಮಕ ತೊಡಕು

ಉಡುಪಿ: ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು 2018ರಲ್ಲಿ ವೃಂದಾವನಸ್ಥರಾದ ಬಳಿಕ ಉದ್ಭವಿಸಿದ್ದ ಆಡಳಿತಾತ್ಮಕ ತೊಡಕು ನಿವಾರಣೆಯಾಗುತ್ತಿದ್ದು, ಮಠ ಸುಸ್ಥಿತಿಗೆ ತರುವಲ್ಲಿನ ಶ್ರಮ ಫಲ ನೀಡುತ್ತಿದೆ ಎಂದು ದ್ವಂದ್ವ ಮಠಾಧಿಪತಿ ನೆಲೆಯಲ್ಲಿ ಮಠದ ಆಡಳಿತ ಉಸ್ತುವಾರಿ ವಹಿಸಿರುವ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಠದ ಅನೇಕ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ತೊಡಕು ನಿವಾರಿಸಲಾಗುತ್ತಿದೆ. ಸದ್ಯಕ್ಕೆ ಮಠದ ಆಡಳಿತ ಸುಸೂತ್ರವಾಗಿ ನಡೆಯಲು ಪ್ರಾರಂಭವಾಗಿದ್ದು, ಶೀಘ್ರದಲ್ಲಿ ಮಠದ ಉತ್ತರಾಧಿಕಾರಿ ಯತಿಯನ್ನೂ ನೇಮಿಸಲಾಗುವುದು ಎಂದರು.
ಶೀರೂರು ಮೂಲ ಮಠ ಮತ್ತು ಉಡುಪಿ ಮಠದಲ್ಲಿ ಕೆಲವು ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ. ಅದಕ್ಕಾಗಿ ಅನುಕ್ರಮವಾಗಿ ಸುಮಾರು 50 ಲಕ್ಷ ಹಾಗೂ 20 ಲಕ್ಷ ರೂ. ವಿನಿಯೋಗಿಸಲಾಗಿದೆ. ಶೀರೂರು ಮೂಲ ಮಠದಿಂದ ಸುಮಾರು 2 ಕಿ. ಮೀ. ದೂರದಲ್ಲಿರುವ ಸಾಂತ್ಯಾರು ಮಠ ತೀರಾ ಶಿಥಿಲವಾಗಿದ್ದರಿಂದ ಕಳೆದ ವರ್ಷ ನವೀಕರಣಕ್ಕಾಗಿ ಮುಖ್ಯಪ್ರಾಣ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನೂತನ ಗುಡಿ ಕಾಮಗಾರಿ ಆರಂಭಿಸಲಾಗಿದೆ. ಶೀರೂರು ಮೂಲ ಮಠದ ಸಮೀಪದ ದುರ್ಗಾಪರಮೇಶ್ವರಿ ಅಮ್ಮನವರ ಗದ್ದುಗೆ ಗ್ರಾಮಸ್ಥರ ನೆರವಿನಿಂದ ನವೀಕರಣಗೊಳ್ಳಲಿದೆ. ಹಿರಿಯಡ್ಕ ಸಮೀಪದ ಪಾಪುಜೆ ಮಠದ ಜೀರ್ಣೋದ್ಧಾರವನ್ನೂ ಸಂಕಲ್ಪಿಸಲಾಗಿದೆ. ಈ ಎಲ್ಲ ಕಾರ್ಯಗಳೂ ಮುಂದಿನ ರಾಮ ನವಮಿ ವೇಳೆಗೆ ಪೂರ್ಣಗೊಳ್ಳಲಿವೆ. ಶೀರೂರು ಮಠದ ದೈನಂದಿನ ಖಚರ್ು ವೆಚ್ಚ ಹಾಗೂ ಶೀರೂರು ಗೋಶಾಲೆಯ ನಿರ್ವಹಣೆಗೆ ಮಣಿಪಾಲದಲ್ಲಿರುವ ಲಕ್ಷ್ಮೀ ಸಮ್ಮಿತ್ ವಾಣಿಜ್ಯ ಮಳಿಗೆಯಿಂದ ಬರುವ ಬಾಡಿಗೆ ಹಾಗೂ ರಥಬೀದಿ ಶೀರೂರು ಮಠದ ಕಟ್ಟಡಗಳಿಂದ ಬರುವ ಬಾಡಿಗೆಯಿಂದ ಭರಿಸಲಾಗಿದೆ. ಮಠದ ಯಾವುದೇ ಸೊತ್ತುಗಳನ್ನು ವಿಕ್ರಯಿಸಿಲ್ಲ ಅಥವಾ ಪರಭಾರೆ ಮಾಡಿಲ್ಲ ಎಂದು ಶ್ರೀಪಾದರು ಸ್ಪಷ್ಟಪಡಿಸಿದರು.

ಕನಕ ಮಾಲ್ ಸಮಸ್ಯೆಗೆ ಮುಕ್ತಿ
ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ತೀರಾ ನೆನೆಗುದಿಗೆ ಬಿದ್ದಿದ್ದ ಕನಕ ಮಾಲ್ ನಿರ್ಮಾಣದ ತೊಡಕನ್ನು ಸಂಧಾನದ ಮೂಲಕ ಮಠದ ಹಿತಾಸಕ್ತಿಗೆ ಅನುಗುಣವಾಗಿ ನ್ಯಾಯಾಂಗದ ಚೌಕಟ್ಟಿನೊಳಗೆ ಬಗೆಹರಿಸಲಾಗುತ್ತಿದೆ. ಮಠದ ಭಕ್ತರಾಗಿರುವ ಮುಂಬೈನ ಹಿರಿಯ ಉದ್ಯಮಿಯೊಬ್ಬರು ಜಂಟಿ ಅಭಿವೃದ್ಧಿ ಮಾದರಿ ಆಧಾರದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಿದ್ದಾರೆ. ಉದ್ದೇಶಿತ ನೆಲಮಹಡಿ ಮತ್ತು 8 ಮಹಡಿಗಳ ಪೈಕಿ ಮೇಲಿನ 4 ಮಹಡಿಗಳನ್ನು ಸುಸಜ್ಜಿತ ರೀತಿಯಲ್ಲಿ ಪೂರ್ಣಗೊಳಿಸಿ ಶೀರೂರು ಮಠಕ್ಕೆ ಹಸ್ತಾಂತರಿಸುವರು. ಯೋಜನೆಗೆ ಈ ಹಿಂದಿನ ಉದ್ಯಮಿ, ಕಾರ್ಪೊರೇಷನ್ ಬ್ಯಾಂಕ್ನಿಂದ ಪಡೆದಿರುವ ಸಾಲವನ್ನು ಏಕಗಂಟಿನ ಸೆಟ್ಲ್ಮೆಂಟ್ ಸ್ಕೀಮ್ ನನ್ವಯ 10.75 ಕೋ. ರೂ. ಮರುಪಾವತಿ ಮಾಡಲು ಮೌಖಿಕ ಒಪ್ಪಂದ ನಡೆಸಲಾಗಿದೆ. ಅದರಂತೆ ಉದ್ಯಮಿ 10 ಕೋ. ರೂ. ಭರಿಸಲಿದ್ದಾರೆ. ವಾಣಿಜ್ಯ ಮಳಿಗೆಗಾಗಿ ಮುಂಗಡವಾಗಿ ಕಾಯ್ದಿರಿಸಿದ 10 ಮಂದಿಗೆ ಅಂದಾಜು 10 ಕೋ. ರೂ. ಮರುಪಾವತಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ 1.50 ಕೋ. ರೂ. ಬಾಕಿ ಬಿಲ್ ಪಾವತಿಗೂ ಸಮ್ಮತಿಸಿದ್ದಾರೆ. ಶೀರೂರು ಮಠಕ್ಕೆ 5 ಕೋಟಿ ರೂ. ಮೊತ್ತವನ್ನೂ ನೀಡಲಿದ್ದಾರೆ ಎಂದರು.
ರಾಜ್ಯ ಲೆಕ್ಕಪರಿಶೋಧಕರ ಸಂಘದ ಉಪಾಧ್ಯಕ್ಷ ಎಚ್. ವಿ. ಗೌತಮ್ ಮಾತನಾಡಿ, ಲಕ್ಷ್ಮೀವರತೀರ್ಥ ಶ್ರೀಪಾದರ 2011ರಿಂದ 2015ರ ವರೆಗಿನ ಬ್ಯಾಂಕ್ ವಹಿವಾಟಿಗಾಗಿ ಆದಾಯ ತೆರಿಗೆ ಇಲಾಖೆ 17.34 ಕೋ. ರೂ. ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ. ಮಠದ ಮನವಿ ಮೇರೆಗೆ ಆದಾಯ ತೆರಿಗೆ ಆಯುಕ್ತರು ಬ್ಯಾಂಕ್ ಖಾತೆ ವಹಿವಾಟಿಗೆ ಇದ್ದ ನಿರ್ಬಂಧ ತೆರವುಗೊಳಿಸಿದ್ದಾರೆ. ಜೊತೆಗೆ ಮಠದ ಹಿಂದಿನ ಆಡಳಿತ ಆದಾಯ ತೆರಿಗೆ ವಿನಾಯತಿ ಪಡೆಯದ ಕಾರಣ ಆದಾಯ ತೆರಿಗೆ ಇಲಾಖೆ 37 ರೂ. ಲಕ್ಷ ತೆರಿಗೆ ಪಾವತಿಗೆ ಸೂಚನೆ ನೀಡಿದೆ. ಪ್ರಸಕ್ತ ಶಿರೂರು ಮಠ 2018ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಕಾನೂನಿನ ಸೆಕ್ಷನ್ 12ಎಎ ಅಡಿ ನೋಂದಣಿ ಮಾಡಿಸಿಕೊಂಡಿದ್ದು, ಮಠದ ಕಟ್ಟಡ ಅಭಿವೃದ್ಧಿಗೆ ಸಂಬಂಧಿಸಿದ ಬಂಡವಾಳದ ಲಾಭಾಂಶಕ್ಕೆ ತೆರಿಗೆ ವಿನಾಯತಿ ಪಡೆಯಬಹುದಾಗಿದೆ ಎಂದರು.
ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಪಾದರು ಮಾತನಾಡಿ, ಜಟಿಲ ಸಮಸ್ಯೆಯನ್ನು ಸುಲಲಿತವಾಗಿ ಬಗೆಹರಿಸಿದ ರೀತಿ ತೃಪ್ತಿ ತಂದಿದೆ ಎಂದರು.
ಉಡುಪಿ ಮಾನವ ಹಕ್ಕುಗಳ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭೋಗ್, ಮಂಗಳೂರು ಶಾರದಾ ವಿದ್ಯಾಲಯ ಮುಖ್ಯಸ್ಥ ಪ್ರೊ. ಎಂ. ಬಿ. ಪುರಾಣಿಕ್, ತೋಟದ ಮನೆ ದಿವಾಕರ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರಿದ್ದರು.

ಶೀರೂರು ಮಠಕ್ಕೆ ಹೊಸ ಯತಿ
ಶೀರೂರು ಮಠ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರಾಪ್ತ ವಯಸ್ಸಿನ ಯೋಗ್ಯ ವಟುವನ್ನು ಆಯ್ಕೆ ಮಾಡಿದ್ದು, ಗುರುಕುಲದಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಹಿರಿಯ ಅಷ್ಟಮಠಾಧೀಶರ ವಿಶೇಷ ಸಹಕಾರದೊಂದಿಗೆ ಉತ್ತರಾಯಣ ಪರ್ವಕಾಲದಲ್ಲಿ ಸಂನ್ಯಾಸ ದೀಕ್ಷೆ ಕೊಡಲಾಗುವುದು ಎಂದು ಶ್ರೀಗಳು ತಿಳಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!