ಉಡುಪಿ: ನೀಲಾವರ ಮಹಿಷಮರ್ದಿನಿ ದೇವಸ್ಥಾನದ ಒಳಪ್ರದಕ್ಷಿಣೆ ಪಥದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಆಡಳಿತಾಧಿಕಾರಿ, ಸಂಶೋಧಕ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಕ್ರಾಸ್ ಲ್ಯಾಂಡ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಗುರುಮೂರ್ತಿ ಕೆ. ಕೆ. ಹಾಗೂ ಸಂಶೋಧಕ ಶ್ರುತೇಶ್ ಆಚಾರ್ಯ ನೆರವಿನಿಂದ ಓದಲಾದ ಈ ಶಾಸನ ಕ್ರಿ. ಶ. 1468ರಲ್ಲಿ ಬರೆಸಲಾಗಿದ್ದು, ಅದು ವಿಜಯನಗರದ ಅರಸನಾಗಿದ್ದ ವಿರೂಪಾಕ್ಷ ಮಹಾರಾಯನ ಕಾಲದ್ದಾಗಿದೆ. ಆಗ ಬಾರಕೂರಿನ ರಾಜ್ಯಪಾಲನಾಗಿದ್ದವ ವಿಠರಸ ಒಡೆಯ. ಇದೊಂದು ಧರ್ಮಶಾಸನ ಎಂದು ಡಾ| ಶೆಟ್ಟಿ ತಿಳಿಸಿದ್ದಾರೆ.
ನೀಲಾವರ ಗ್ರಾಮ ನಿಳುವರದ ಗ್ರಾಮ ಎಂಬುದಾಗಿ ಉಲ್ಲೇಖವಾಗಿದೆ. ಹೆಚ್ಚಿನ ವಿಜಯನಗರ ಶಾಸನಗಳಲ್ಲಿ ರಾಜನ ಬಗ್ಗೆ ಹೇಳುವಾಗ `ಚತುಸ್ಸಮುದ್ರಾಧಿಪತಿ’ ಎಂಬ ಉಲ್ಲೇಖ ಬರುತ್ತದೆಯಾದರೂ ಇಲ್ಲಿ ರಾಜನ ಬಗ್ಗೆ ಹೇಳುವಾಗ `ಆವನು ದಕ್ಷಿಣ ಪಶ್ಚಿಮ ಸಮುದ್ರದ ಮಧ್ಯೆ ಸಮಸ್ತವನು ಪ್ರತಿಪಾಲಿಸುತ್ತಿದ್ದ’ ಎಂದು ಹೇಳಲಾಗಿದೆ. ಇದು ಸಂಗಮ ವಂಶದ ಕೊನೆಗಾಲದಲ್ಲಿ ರಾಜಕೀಯ ಹಿನ್ನಡೆಯ ಸೂಚನೆ ಎಂದೂ ಭಾವಿಸಬಹುದು. ಅಲ್ಲದೆ, ಯೆಲ್ಲಪ್ಪ ಒಡೆಯ ಹಾಗೂ ಮಾಬಯ್ಯ ಒಡೆಯನ ಉಲ್ಲೇಖವೂ ಬರುತ್ತದೆ. ತೆಂಗಿನೆಣ್ಣೆಗೆ ಇದ್ದ ಪ್ರಾಮುಖ್ಯತೆ ವ್ಯಕ್ತವಾಗಿದೆ. ಶಾಪವಾಕ್ಯಗಳನ್ನು ಉಲ್ಲೇಖಿಸುವಾಗ ಶಾಸನ ರಕ್ಷಿಸಿದರೆ ಸಿಗುವ ಪುಣ್ಯದ ಬಗ್ಗೆ ಹೇಳುವಾಗ ದೇವರಿಗೆ ತೆಂಗಿನೆಣ್ಣೆ ಹೊಯ್ದ ಫಲ ಎಂದಿರುವುದು ವಿಶೇಷವಾಗಿದೆ ಎಂದು ಜಗದೀಶ ಶೆಟ್ಟಿ ತಿಳಿಸಿದ್ದಾರೆ.
ಶಾಸನದ ಬಗ್ಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸುಧೀರ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದು, ಪ್ರತಿ ಮಾಡಲು ಸಂಶೋಧಕ ಸುಭಾಷ ನಾಯಕ್ ಸಹಕರಿಸಿದ್ದಾರೆ.