Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ನೂತನ ಯತಿ ಕೃಷ್ಣಮಠ ಭೇಟಿ

ನೂತನ ಯತಿ ಕೃಷ್ಣಮಠ ಭೇಟಿ

ಉಡುಪಿ: ಶೀರೂರು ಮಠದ ನೂತನ ಯತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶುಕ್ರವಾರ ಸಂಜೆ ತಮ್ಮ ಗುರುಗಳಾದ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣಮಠಕ್ಕೆ ಆಗಮಿಸಿದರು.

ಅದಕ್ಕೂ ಮುನ್ನ ನೂತನ ಯತಿಗಳನ್ನು ಮಠೀಯ ಪರಂಪರೆಯಂತೆ ಸಂಸ್ಕೃತ ಕಾಲೇಜಿನಿಂದ ಮೆರವಣಿಗೆಯಲ್ಲಿ ವೇದ- ವಾದ್ಯ ಘೋಷದೊಂದಿಗೆ ಬರಮಾಡಿಕೊಳ್ಳಲಾಯಿತು.

ಶ್ರೀ ಅನಂತೇಶ್ವರ, ಶ್ರೀ ಚಂದ್ರೇಶ್ವರ ದೇವರ ದರ್ಶನದ ಬಳಿಕ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ ಮಾಡಿದ ಶ್ರೀ ವೇದವರ್ಧನತೀರ್ಥ ಶ್ರೀಪಾದರನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಠದ ಮುಂಭಾಗದಲ್ಲಿ ಗೌರವಾದರಗಳಿಂದ ಹಸ್ತಲಾಘವದೊಂದಿಗೆ ಬರಮಾಡಿಕೊಂಡರು.

ಕನಕ ನವಗ್ರಹ ಕಿಂಡಿ ಮೂಲಕ ಕೃಷ್ಣ ದರ್ಶನ ಮಾಡಿಸಿದರು.

ಶ್ರೀಕೃಷ್ಣನಿಗೆ ಆರತಿ ಬೆಳಗಿದ ಯತಿ
ಶೀರೂರು ಮಠದ ನೂತನ ಯತಿಯಾಗಿ ಪಟ್ಟಾಭಿಷಿಕ್ತರಾದ ಬಳಿಕ ಪ್ರಥಮ ಬಾರಿಗೆ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣ ದೇವರಿಗೆ ಆರತಿ ಬೆಳಗಿದರು.

ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಇದ್ದರು.

ಬಳಿಕ ಚಂದ್ರಶಾಲೆಯಲ್ಲಿ ಮಾಲಿಕಾ ಮಂಗಳಾರತಿ ನಡೆಯಿತು.

ಪರ್ಯಾಯ ಶ್ರೀಪಾದರಿಗೆ ಶೀರೂರು ಶ್ರೀಪಾದರು ಗಂಧಾದ್ಯುಪಚಾರ ಹಾಗೂ ಮಾಲಿಕಾ ಮಂಗಳಾರತಿ ಬೆಳಗಿದರು. ಪರ್ಯಾಯ ಅದಮಾರು ಮಠದ ವತಿಯಿಂದ ನೂತನ ಯತಿಯನ್ನು ಶ್ರೀ ಈಶಪ್ರಿಯತೀರ್ಥರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ದ್ವೈತ ಸಿದ್ಧಾಂತ ಪ್ರತಿಪಾದನಾಚಾರ್ಯ ಲೋಕಗುರು ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿಠಲ ಪಾದಪದ್ಮಾರಾಧಕ ಶ್ರೀ ವಾಮನತೀರ್ಥ ಯತಿ ಪರಂಪರೆಯ ಶೀರೂರು ಮಠದ ನೂತನ ಉತ್ತರಾಧಿಕಾರಿ ಹಾಗೂ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಕರಕಮಲಸಂಜಾತರಾದ ಶ್ರೀ ವೇದವರ್ಧನತೀರ್ಥರ ಹೆಸರಿನಂತೆ ಮಠದಲ್ಲಿ ವೇದೋತ್ಕರ್ಷವಾಗಲಿ ಎಂದು ಹಾರೈಸಿದರು.

ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಂದೇಶ ನೀಡಿದರು.

ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್, ಪಾರುಪತ್ಯಗಾರ ಲಕ್ಷ್ಮೀಶ ಭಟ್, ರೋಹಿತ್ ತಂತ್ರಿ, ಶ್ರೀಕೃಷ್ಣ ಸೇವಾ ಬಳಗದ ವೈ. ಎನ್. ರಾಮಚಂದ್ರ ರಾವ್, ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಉದಯ ಸರಳತ್ತಾಯ ಮೊದಲಾದವರಿದ್ದರು.

ಬಳಿಕ ಶೀರೂರು ಮಠ ಪ್ರವೇಶಿಸಿದರು.

ತದನಂತರದಲ್ಲಿ ಅಷ್ಟಮಠಗಳಿಗೆ ತೆರಳಿ ಎಲ್ಲ ಯತಿಗಳಿಗೂ ಗೌರವ ಸಮರ್ಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!