ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸಲು ಆಗ್ರಹ
ಕಾಪು: ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ ಕಾರಣಕ್ಕಾಗಿ ತರಗತಿ ಪ್ರವೇಶ ನಿರಾಕರಿಸಿದ ಮತ್ತು ಕಾಲೇಜು ಕ್ಯಾಂಪಸ್ ನಲ್ಲಿ ಭಾಷಾ ನಿರ್ಬಂಧ ವಿಧಿಸಿರುವ ಕುರಿತು ಕೂಡಲೇ ಮಧ್ಯಪ್ರವೇಶ ಮಾಡಿ ತನಿಖೆ ನಡೆಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮಾಜಿ ಅಧ್ಯಕ್ಷ ಎಂ. ಪಿ. ಮೊಯ್ದಿಬ್ಬ ಅವರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಕೂರ್ಮರಾವ್ ಅವರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿ, ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ಪ್ರಕರಣ ನಡೆದಿರುವುದು ತೀರಾ ಆಘಾತಕಾರಿ ಸಂಗತಿ. ಪ್ರಶಾಂತ ವಾತಾವರಣದಲ್ಲಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಇಂಥ ಕಾನೂನುಬಾಹಿರ ಆದೇಶ ನೀಡಿ ಗೊಂದಲದ ವಾತಾವರಣ ನಿರ್ಮಾಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತರಗತಿಯಲ್ಲಿ ವ್ಯಾಸಂಗ ಮಾಡುವಾಗ ಒಂದು ನಿರ್ದಿಷ್ಟ ಭಾಷಾ ನಿಯಮ ಇರುವುದು ಸಹಜ. ಆದರೆ, ತರಗತಿ ಮುಗಿಸಿದ ನಂತರ ಇಂಥದೇ ಭಾಷೆ ಉಪಯೋಗಿಸಬೇಕು ಎಂಬುದನ್ನು ವಿದ್ಯಾರ್ಥಿನಿಯರಿಗೆ ಬಲವಂತಪಡಿಸುವ ಹಕ್ಕು ಕಾಲೇಜು ಪ್ರಾಂಶುಪಾಲರು ಅಥವಾ ಉಪನ್ಯಾಸಕರಿಗೆ ಇರುವುದಿಲ್ಲ. ಇದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳನ್ನು ತಡೆಯುವ ಮತ್ತು ಮತೀಯ ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ಪ್ರಯತ್ನ ಎಂದು ವಿಶ್ಲೇಷಿಸಿರುವ ಮೊಯ್ದಿನಬ್ಬ, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ