Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಪಡಿತರ ವ್ಯವಸ್ಥೆಯಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಿಸಲು ಕೇಂದ್ರ ಸಮ್ಮತಿ

ಪಡಿತರ ವ್ಯವಸ್ಥೆಯಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಿಸಲು ಕೇಂದ್ರ ಸಮ್ಮತಿ

ಸುದ್ದಿಕಿರಣ ವರದಿ
ಶುಕ್ರವಾರ, ಜನವರಿ 7, 2022

ಪಡಿತರ ವ್ಯವಸ್ಥೆಯಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಿಸಲು ಕೇಂದ್ರ‌ ಸಮ್ಮತಿ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮಾ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ (MSP)ಯಲ್ಲಿ ಖರೀದಿಸಿ, ಪಡಿತರ ವ್ಯವಸ್ಥೆ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ವಿತರಿಸುವಂತೆ ಉಡುಪಿ ಮತ್ತು ದ.ಕ. ಜಿಲ್ಲೆಗಳ ಜನತೆ ಬಹು ಹಿಂದಿನಿಂದಲೂ ಬೇಡಿಕೆ ಸಲ್ಲಿಸಿದ್ದರು. ಆ ಕುರಿತಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರದ ಪ್ರಸಕ್ತ ಇಲಾಖೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು, ಜನರ ಬೇಡಿಕೆ ಅನುಮೋದಿಸುವಂತೆ‌ ವಿನಂತಿಸಿದ್ದರು.

ಸಚಿವೆ ಶೋಭಾ ಅವರ ಮನವಿ ಪರಿಗಣಿಸಿದ ಸಚಿವ ಪಿಯೂಷ್ ಗೋಯಲ್ ಜ. 6ರಂದು ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಪತ್ರ ಬರೆದು ಅವಿಭಜಿತ ದ.ಕ. ಜಿಲ್ಲೆಯ ಕುಚ್ಚಲಕ್ಕಿ ಪ್ರಭೇದಗಳನ್ನು ಕನಿಷ್ಠ ಬೆಂಬಲ‌ ಬೆಲೆಯಲ್ಲಿ ಖರೀದಿಸಿ ಪಡಿತರ ಮೂಲಕ ವಿತರಿಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಕೇಂದ್ರದ ಈ ಅನುಮತಿಯೊಂದಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರ ಕೃಷಿ ಉತ್ಪಾದನೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಅಲ್ಲದೇ, ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸಬೇಕೆನ್ನುವ ಈ ಭಾಗದ ಜನತೆಯ ಬೇಡಿಕೆಗೆ ಪುಷ್ಟಿ ಸಿಕ್ಕಿದೆ ಎಂದು ಸಚಿವೆ ಕರಂದ್ಲಾಜೆ ತಿಳಿಸಿದ್ದಾರೆ.

ಬಹುಕಾಲದ ಬೇಡಿಕೆ ಈಡೇರಿಸುವಲ್ಲಿ ಸಹಕರಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಅಭಿನಂದನೆ ಸಲ್ಲಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!