Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಶಿಕ್ಷಣ ತಜ್ಞ, ಹಿರಿಯ ಪತ್ರಕರ್ತ ದಾಮೋದರ ಐತಾಳ ವಿಧಿವಶ

ಶಿಕ್ಷಣ ತಜ್ಞ, ಹಿರಿಯ ಪತ್ರಕರ್ತ ದಾಮೋದರ ಐತಾಳ ವಿಧಿವಶ

ಉಡುಪಿ: ವಿಶ್ರಾಂತ ಪ್ರಾಂಶುಪಾಲ, ಹಿರಿಯ ಪತ್ರಕರ್ತ, ಬಳಕೆದಾರರ ವೇದಿಕೆ ಮಾಜಿ ಸಂಚಾಲಕ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕಡಿಯಾಳಿ ದಾಮೋದರ ಐತಾಳ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕನ್ನಡ ಪಂಡಿತರಾಗಿ ಸುದೀರ್ಘ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಅವರು, ನಾಡಿನ ವಿವಿಧೆಡೆಗಳ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿದ್ದರು. ನಿವೃತ್ತಿಯ ಬಳಿಕ ಕನ್ನಡ ಪ್ರಭ‘ ವರದಿಗಾರನಾಗಿ, ಹೊಸದಿಗಂತ‘ ಪತ್ರಿಕೆಯ ಅಂಕಣಕಾರರಾಗಿ ಕಾರ್ಯನಿರ್ವಹಿಸಿದ್ದರು. ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ಪತ್ರಕರ್ತರಿಗೆ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಉಡುಪಿಯಲ್ಲಿ ನಡೆಸುವಲ್ಲಿ ಕಾರಣರಾಗಿದ್ದರು.

ಮಂಗಳೂರು ಡಿಡಿಪಿಐ ಕಚೇರಿಯಲ್ಲಿ ವಿಷಯ ಪರಿವೀಕ್ಷಣಾಧಿಕಾರಿಯಾಗಿದ್ದ ಐತಾಳ, ಉಡುಪಿ ಶಿಕ್ಷಕರ ಸಹಕಾರಿ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಉಡುಪಿ ಕೃಷ್ಣ ಮಠದ ಚಿನ್ನರ ಸಂತರ್ಪಣೆ ಯೋಜನೆ ಆರಂಭದಲ್ಲಿ ತೊಡಗಿಕೊಂಡಿದ್ದರು. ವಿವಿಧ ಮಠಗಳ ಪರ್ಯಾಯ ಸಂದರ್ಭದಲ್ಲಿ ಸಹಕರಿಸಿದ್ದರು.

ಉಡುಪಿ ಬಳಕೆದಾರರ ವೇದಿಕೆ ಸಂಚಾಲಕರಾಗಿ, ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ)ದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ನೀಡುವ ಸೇವಾ ಭೂಷಣ ಪ್ರಶಸ್ತಿ ಲಭಿಸಿತ್ತು.
ಮೃತರು ನಾಲ್ವರು ಪುತ್ರಿಯರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸಂತಾಪ
ದಾಮೋದರ ಐತಾಳ ನಿಧನಕ್ಕೆ ಶಾಸಕ ರಘುಪತಿ ಭಟ್, ಸಮಾಜಸೇವಕ ವಾಸುದೇವ ಭಟ್ ಪೆರಂಪಳ್ಳಿ, ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಯತಿಗಳಿಂದ ಪ್ರಾರ್ಥನೆ
ಕೆ. ದಾಮೋದರ ಐತಾಳ ನಿಧನಕ್ಕೆ ಖೇದ ವ್ಯಕ್ತಪಡಿಸಿರುವ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಶ್ರೀಕೃಷ್ಣಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಉತ್ತಮ ಶಿಕ್ಷಕ ಹಾಗೂ ಉತ್ತಮ ಬರಹಗಾರರಾಗಿದ್ದ ಐತಾಳ ಮಠ- ಮಂದಿರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಶ್ರೀಕೃಷ್ಣ ಮಠದ ಚಿಣ್ಣರ ಸಂತರ್ಪಣೆ ಯೋಜನೆಯ ಆರಂಭದಲ್ಲಿ ಸ್ಫೂರ್ತಿದಾಯಕರಾಗಿದ್ದರು ಎಂದು ಉಭಯ ಶ್ರೀಗಳು ಸ್ಮರಿಸಿದ್ದಾರೆ.

ಐತಾಳ ನಿಧನಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರೂ ಸಂತಾಪ ಸೂಚಿಸಿದ್ದಾರೆ. `ನಮ್ಮ ಪ್ರಥಮ ಶ್ರೀಕೃಷ್ಣ ಪರ್ಯಾಯ ಸಂದರ್ಭದಲ್ಲಿ ಪ್ರಾರಂಭಗೊಂಡ ಚಿಣ್ಣರ ಸಂತರ್ಪಣೆ ಯೋಜನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಮುಂದೆಯೂ ಅದನ್ನು ಉತ್ತಮ ರೀತಿಯಲ್ಲಿ ಮುನ್ನಡೆಯುವಂತೆ ಭದ್ರ ಬುನಾದಿ ಹಾಕಿಕೊಟ್ಟ, ಬಳಕೆದಾರರ ವೇದಿಕೆ ಮೂಲಕ ವಿಶೇಷವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ, ಸಮಾಜಸೇವೆಗಾಗಿ ತನ್ನನ್ನು ತೊಡಗಿಸಿಕೊಂಡ ಸರಳ ಸಜ್ಜನಿಕೆಯ, ಭಗವದ್ಭಕ್ತರೂ ನಮ್ಮ ಮಠದ ಅಭಿಮಾನಿಗಳಾದ ದಾಮೋದರ ಐತಾಳ್ ನಿಧನರಾಗಿರುವುದು ಅತೀವ ದುಃಖ ತಂದಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಕೊಟ್ಟು, ಮೃತರ ಆತ್ಮಕ್ಕೆ ಸದ್ಗತಿಯಾಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುತ್ತೇವೆ’ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪತ್ರಕರ್ತರ ಸಂಘ ಕಂಬನಿ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ದಾಮೋದರ ಐತಾಳ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಂಬನಿ ಮಿಡಿದಿದೆ.

ಐತಾಳ್ ಗೌರವಾರ್ಥ ಸಂತಾಪ ಸೂಚಕ ಸಭೆ ನಡೆಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!