Monday, July 4, 2022
Home ಸಮಾಚಾರ ಸಾಂಪ್ರದಾಯಿಕ ಪರಂಪರೆ ಮರೆವಿಗೆ ಪುತ್ತಿಗೆಶ್ರೀ ವಿಷಾದ

ಸಾಂಪ್ರದಾಯಿಕ ಪರಂಪರೆ ಮರೆವಿಗೆ ಪುತ್ತಿಗೆಶ್ರೀ ವಿಷಾದ

ಸಾಂಪ್ರದಾಯಿಕ ಪರಂಪರೆ ಮರೆವಿಗೆ ಪುತ್ತಿಗೆಶ್ರೀ ವಿಷಾದ

(ಸುದ್ದಿಕಿರಣ ವರದಿ)
ಉಡುಪಿ: ಯಾಂತ್ರೀಕರಣದ ಪ್ರಭಾವದಿಂದ ಸಾಂಪ್ರದಾಯಿಕ ಪರಂಪರೆಯನ್ನು ನಾವಿಂದು ಮರೆಯುತ್ತಿದ್ದೇವೆ. ವಿಕೃತ ಆಚರಣೆಗಳೇ ವೈಭವವನ್ನು ಪಡೆಯುತ್ತಿರುವುದು ಅತ್ಯಂತ ಶೋಚನೀಯವಾಗಿದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿಷಾದಿಸಿದರು.

ಅಮೆರಿಕಾದ ನ್ಯೂಜೆರ್ಸಿಯಲ್ಲಿನ ಶ್ರೀಮಠದ ಶಾಖೆ ಶ್ರೀಕೃಷ್ಣ ವೃಂದಾವನದಲ್ಲಿ ನಡೆಯುತ್ತಿರುವ 48ನೇ ಚಾತುರ್ಮಾಸ್ಯ ಪರ್ವಕಾಲದಲ್ಲಿ ಚಾತುರ್ಮಾಸ್ಯ ಸೇವಾ ಸಮಿತಿಯವರು ಸಂಘಟಿಸಿದ್ದ ಶ್ರೀಪಾದರ ಷಷ್ಟಬ್ದಿಪೂರ್ತಿ ಸಮಾರಂಭ ಹಾಗೂ ಜನ್ಮನಕ್ಷತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜನ್ಮದಿನವನ್ನು ದೀಪವನ್ನು ಆರಿಸಿ ಆಚರಿಸುವುದನ್ನು ಕಾಣುತ್ತಿದ್ದೇವೆ. ಆದರೆ, ನಮ್ಮ ಜೀವನ ವಿಕಾಸಗೊಳ್ಳಬೇಕಾದರೆ ಹಿರಿಯರ ಮಾರ್ಗ ಅನುಸರಿಸಬೇಕು. ಎಂದಿಗೂ ಬೆಳಗುವ ಜ್ಞಾನದ ದೀಪವನ್ನು ಬೆಳಗಿಸಬೇಕು. ಜನ್ಮದಿನದ ಸಂಭ್ರಮದಲ್ಲಿ ಜ್ಞಾನ ಕಾರ್ಯವನ್ನು ವಿಶೇಷವಾಗಿ ನಡೆಸಬೇಕು. ಅದು ನಮ್ಮ ಜೀವನವನ್ನು ನಿರಂತರವಾಗಿ ಬೆಳಗಿಸುತ್ತದೆ ಎಂದು ಶ್ರೀಪಾದರು ಹೇಳಿದರು.

ಈ ಸಂದರ್ಭದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಜಿಜ್ಞಾಸುಗಳಿಗಾಗಿ ಪ್ರಶ್ನೋತ್ತರ ರೂಪವಾದ ಜ್ಞಾನ ಸಂಗಮ ಕಾರ್ಯಕ್ರಮ ಉದ್ಘಾಟಿಸಿದರು.

ಬೆಳಿಗ್ಗೆ ಶ್ರೀಮಠದ ವಿದ್ವಾಂಸ ಯೋಗೀಂದ್ರ ಭಟ್ ನೇತೃತ್ವದಲ್ಲಿ ಜನ್ಮನಕ್ಷತ್ರ ಶಾಂತಿ ಹೋಮ, ಭಗವದ್ಗೀತಾ ಪಾರಾಯಣ ಹಾಗೂ ಸಂಸ್ಥಾನ ಪೂಜೆ, ಅನ್ನಸಂತರ್ಪಣೆ ನಡೆಯಿತು.

ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಚಾತುರ್ಮಾಸ್ಯ ಸೇವಾ ಸಮಿತಿ ವತಿಯಿಂದ ಡಾ. ಸುಧೀಂದ್ರ ಪೂರ್ಣಿಮಾ ನೇತೃತ್ವದಲ್ಲಿ ಶ್ರೀಪಾದರಿಗೆ ತುಲಾಭಾರ ಸೇವೆಯೊಂದಿಗೆ ರಜತ ಕಿರೀಟ ಸಮರ್ಪಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥಾನ ವಿದ್ವಾಂಸರಾದ ಕೇಶವ ತಾಡಪತ್ರಿ ಮತ್ತು ಜಯತೀರ್ಥ ನೆಲಮಂಗಲ, ಶ್ರೀಮಠದ ದಿವಾನ ಎಂ. ಪ್ರಸನ್ನ ಆಚಾರ್ಯ, ಸುರೇಶ್, ರವಿ ಪ್ರಸಾದ್ ಮೊದಲಾದವರಿದ್ದರು.

ಕೊರೊನಾ ನಿಯಮ ಪಾಲನೆಯೊಂದಿಗೆ ವ್ಯವಸ್ಥಿತವಾಗಿ ಕಾರ್ಯಕ್ರಮ ಸಂಪನ್ನವಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!