ಅಲಕ್ಷಿತ ಬುಡಕಟ್ಟುಗಳು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಬೇಕು
ಉಡುಪಿ: ಉಡುಪಿ ಜಿಲ್ಲೆಯ ಕುಡುಬಿ ಸಮುದಾಯ, ಉತ್ತರ ಕನ್ನಡದ ಹಾಲಕ್ಕಿ ಸಮುದಾಯ ಹಾಗೂ ದಕ್ಷಿಣ ಕನ್ನಡದ ಚೆನ್ನದಾಸ ಸಮುದಾಯ ಇತ್ಯಾದಿಗಳು ಬುಡಕಟ್ಟು ಸಮುದಾಯಗಳ ಆಚರಣೆ, ಸಂಸ್ಕೃತಿ ಹಾಗೂ ಭಾಷೆಯನ್ನು ಹೊಂದಿವೆ. ಆ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಅನಿವಾರ್ಯತೆ ಇದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಡಾ| ದುಗ್ಗಪ್ಪ ಕಜೆಕಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, ಐ.ಕ್ಯೂ.ಎ.ಸಿ. ಸಮಾಜಶಾಸ್ತ್ರ ವಿಭಾಗ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಶಿವಮೊಗ್ಗ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಜನಜಾತಿ ದಿವಸ ಅಂಗವಾಗಿ ನಡೆದ ಬುಡಕಟ್ಟು ಜನಾಂಗ-ಸಂಸ್ಕೃತಿ ಮತ್ತು ತಲ್ಲಣಗಳು ಕುರಿತ ಜಾಲಗೋಷ್ಠಿಯ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದರು.
ಪ್ರತೀ ಬುಡಕಟ್ಟು ಭಾಷೆ, ಸಂಸ್ಕೃತಿ, ಉಡುಗೆ, ಆಹಾರ ಕ್ರಮದಲ್ಲಿ ವಿಭಿನ್ನವಾಗಿವೆ. ಅವುಗಳನ್ನು ನಾವು ಒಂದಕ್ಕೊಂದು ಹೋಲಿಸಬಾರದು. ಅಲ್ಲದೇ ಬುಡಕಟ್ಟುಗಳಿಗೆ ಜಾತಿ ಧರ್ಮವಿಲ್ಲ, ಸಂಸ್ಕೃತೀಕರಣದ ಪ್ರಭಾವದಿಂದ ಕೆಲವೊಂದು ಬುಡಕಟ್ಟುಗಳು ಹಿಂದೂ ಧರ್ಮ, ಜಾತಿ, ಧರ್ಮದ ಬಣ್ಣ ಪಡೆದಿವೆ. ಆ ಸಮುದಾಯಗಳು ಕರ್ನಾಟಕ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಕಾರಣಾಂತರಗಳಿಂದ ಪ್ರವರ್ಗ 1ರಲ್ಲಿ ಜಾತಿಗಳಾಗಿ ಪರಿಗಣಿಸಲ್ಪಟ್ಟಿವೆ ಎಂದು ಡಾ| ಕಜೆಕಾರ್ ಬೊಟ್ಟುಮಾಡಿದರು.
ದಾಂಡೇಲಿ ಬಿ.ಎನ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಸ್.ಎಸ್. ಹಿರೇಮಠ ಅವರು ಸಿದ್ಧಿ ಸಮುದಾಯದ ಸಂಸ್ಕೃತಿ, ಭಾಷೆ ಹಾಗೂ ಅವರ ಕಸುಬುಗಳ ಬಗ್ಗೆ ವಿವರವಾಗಿ ಮಾತನಾಡಿದರು. ಸಿದ್ಧಿಗಳ ವಲಸೆ ಹಾಗೂ ಹಿನ್ನೆಲೆಗಳ ಬಗ್ಗೆಯೂ ಪರಿಚಯಿಸಿದರು.
ಶಿವಮೊಗ್ಗ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕಾರಾಮ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕಾರಿಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಶೇಖರ್ ಸಂಪನ್ಮೂಲವ್ಯಕ್ತಿಗಳ ಮಾತುಗಳನ್ನು ವಿಶ್ಲೇಷಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ| ಮಂಜುಳಾ ಟಿ. ಸ್ವಾಗತಿಸಿದರು