ಉಡುಪಿ: ಬೆಂಗಳೂರಿನ `ನಿನ್ನಾ ಒಲುಮೆಯಿಂದ’ ಪ್ರತಿಷ್ಠಾನ ಆಶ್ರಯದಲ್ಲಿ ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕ ಕ್ಷೇತ್ರದಲ್ಲಿ ವಿಜಯದಾಸರ ಆರಾಧನೆ ಮಹೋತ್ಸವ ಸೋಮವಾರ ಆರಂಭಗೊಂಡಿತು.
ಎರಡು ದಿನಗಳವಧಿಯ ಕಾರ್ಯಕ್ರಮವನ್ನು ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಆಚಾರ್ಯ ಮಧ್ವರ ದ್ವೈತ ಸಿದ್ಧಾಂತವನ್ನು ವಿಜಯದಾಸರು ದಾಸ ಸಾಹಿತ್ಯದ ಮೂಲಕ ಭಗವಂತನ ಸಂದೇಶವನ್ನು ಜನಸಾಮಾನ್ಯರಲ್ಲಿ ಮೂಡಿಸಿದ್ದಾರೆ. ಪ್ರತಿಯೊಂದೂ ವಿಷಯ ಮತ್ತು ವಸ್ತುವಿನಲ್ಲೂ ಭಗವಂತನ ಅನುಸಂಧಾನ ತಿಳಿಸುವ ಬಗ್ಗೆ ಪ್ರತಿಯೊಬ್ಬರ ಮನೆ ಹಾಗೂ ಮನ ಮುಟ್ಟುವಂತೆ ವಿಜಯದಾಸರ ಕೃತಿಗಳು ಮಹತ್ತರ ಕೊಡುಗೆ ನೀಡಿವೆ. `ನಿನ್ನಾ ಒಲುಮೆಯಿಂದ’ ಪ್ರತಿಷ್ಠಾನದ ಮೈಸೂರು ರಾಮಚಂದ್ರಾಚಾರ್ಯ ಹಲವಾರು ವರ್ಷಗಳಿಂದ ವಿವಿಧ ಕಡೆಗಳಲ್ಲಿ ವಿವಿಧ ಮಾಧ್ವ ಯತಿಗಳು, ವಿದ್ವಾಂಸರನ್ನು ಆಹ್ವಾನಿಸಿ ಜ್ಞಾನಸತ್ರ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ದೇಶದ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಸುತ್ತಿದ್ದಾರೆ.. ಈ ಬಾರಿ ಪಾಜಕದಲ್ಲಿ ನಡೆಯುತ್ತಿರುವುದು ಸಂತೋಷದಾಯಕ ಎಂದರು.
ಸಾನ್ನಿಧ್ಯ ವಹಿಸಿದ್ದ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಆಚಾರ್ಯ ಮಧ್ವರ ತತ್ವಗಳನ್ನು ಎಲ್ಲರಿಗೂ ಮುಟ್ಟುವಂತೆ ಮಾಡುವಲ್ಲಿ ದಾಸವರೇಣ್ಯರ ಕೊಡುಗೆ ಗಮನೀಯ. ಅದರಲ್ಲೂ ವಿಜಯದಾಸರು ಶಾಸ್ತ್ರೀಯ ಭಾಷೆಯಲ್ಲಿ ಸರಳವಾಗಿ ರಚಿಸಿ ಜನರಿಗೆ ಭಕ್ತಿ ಮಾರ್ಗ ತೋರಿಸಿಕೊಟ್ಟಿದ್ದಾರೆ ಎಂದರು.
ಭೀಮನಕಟ್ಟೆ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ವಿಜಯ ಎಂದರೆ ಉತ್ಕೃಷ್ಟ ಎಂದರ್ಥ. ದಾಸ ಪರಂಪರೆಯಲ್ಲಿ ಉತ್ಕೃಷ್ಠರಾದ ವಿಜಯದಾಸರು ಅನೇಕ ಸುಳಾದಿಗಳನ್ನೂ ಕೀರ್ತನೆಗಳನ್ನು ರಚಿಸಿ ಸಮಾಜಕ್ಕೆ ನೀಡಿ ಸರ್ವೋತ್ತಮನಾದ ದೇವರ ಮಹಿಮೆ ತಿಳಿಸಿದ್ದಾರೆ. ಅದನ್ನು ನಾವು ಅನುಸರಿಸಿ ಸಾಧನೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದರು.
ನಂತರ ವಿವಿಧ ವಿದ್ವಾಂಸರಿಂದ ಉಪನ್ಯಾಸ ನಡೆದವು.
`ನಿನ್ನಾ ಒಲುಮೆಯಿಂದ’ ಪ್ರತಿಷ್ಠಾನದ ಮೈಸೂರು ರಾಮಚಂದ್ರಾಚಾರ್ಯ ಸ್ವಾಗತಿಸಿ, ನಿರೂಪಿಸಿದರು
ಪಾಜಕ ಕ್ಷೇತ್ರದಲ್ಲಿ ವಿಜಯದಾಸರ ಅರಾಧನೆ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...