ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 26
ಪಿಎಸ್.ಐ ಹಗರಣ ಗ್ರಹಿಸಿದ್ದೆ: ಭಾಸ್ಕರ ರಾವ್
ಉಡುಪಿ: ಪಿಎಸ್.ಐ ಹಗರಣದ ವಾಸನೆ ನನಗೆ ಮೊದಲೇ ಬಡಿದಿತ್ತು.
ಹೀಗೆಂದವರು ಆಮ್ ಆದ್ಮಿ ಪಾರ್ಟಿ ಉಪಾಧ್ಯಕ್ಷ ಹಾಗೂ ಮಾಜಿ ಎಡಿಜಿಪಿ ಭಾಸ್ಕರ ರಾವ್.
ಮಂಗಳವಾರ ಇಲ್ಲಿನ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಕಚೇರಿಗೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಎಡಿಜಿಪಿಯಾಗಿದ್ದ ಅಮೃತ ಪಾಲ್ ಆಗಾಗ ಮುಖ್ಯಮಂತ್ರಿ ಮನೆ ಬಳಿ ಸುಳಿಯುತ್ತಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗುತ್ತಾರೆ ಎಂಬ ಊಹಾಪೋಹವೂ ಹರಡಿತ್ತು. ಅದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ನನಗೆ ಯಾವುದೋ ಹಗರಣದ ವಾಸನೆಯನ್ನು ತಾನು ಈ ಮೊದಲೇ ಗ್ರಹಿಸಿದ್ದೆ ಎಂದರು.
ಕೋರ್ಟ್ ನಿರ್ದೇಶನದಿಂದಾಗಿ ಆರೋಪಿಗಳ ಬಂಧನ!
ಬೆಂಗಳೂರು ನಗರ ಪೊಲೀಸ್ ಆಯುಕ್ತನಾದ ಒಂದೇ ವರ್ಷದಲ್ಲಿ ಅಮೃತ್ ಪಾಲ್ ಆಯುಕ್ತರಾಗಿ ಬರುತ್ತಾರೆ ಎಂಬ ಊಹಾಪೋಹ ಹರಡಿತ್ತು. ನಾನು 90ರ ಬ್ಯಾಚಿನ ಐಪಿಎಸ್ ಅಧಿಕಾರಿ. ಅಮೃತ ಪಾಲ್ 95ರ ಬ್ಯಾಚಿನ ಐಪಿಎಸ್ ಅಧಿಕಾರಿ. 5 ವರ್ಷ ಕಿರಿಯ ಅಧಿಕಾರಿ ಹೇಗೆ ಆಯುಕ್ತರಾಗುತ್ತಾರೆ ಎಂದು ಯೋಚಿಸಿದ್ದೆ. ನಂತರ ಕೆಲವೇ ದಿನಗಳಲ್ಲಿ ಪಿಎಸ್.ಐ ಹಗರಣ ಬೆಳಕಿಗೆ ಬಂದಿತ್ತು.
ಕೋರ್ಟ್ ನಿರ್ದೇಶನದಲ್ಲಿ ತನಿಖೆ ನಡೆದ ಕಾರಣ ಪ್ರಮುಖ ಆರೋಪಿಗಳ ಬಂಧನವಾಗಿದೆ. ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದು ಭಾಸ್ಕರ ರಾವ್ ಹೇಳಿದರು.
ಪಿಎಸ್.ಐ ನೇಮಕಾತಿ ಹಗರಣ ವಿಷಯವನ್ನು ರಾಜ್ಯಪಾಲರ ಬಳಿ ಕೊಂಡೊಯ್ದ ಮೊದಲ ರಾಜಕೀಯ ಪಕ್ಷ ಆಮ್ ಆದ್ಮಿ.
ತನಿಖೆ ಆಗುವ ವರೆಗೂ ಪರೀಕ್ಷೆ ಮಾಡುವುದಿಲ್ಲ ಎನ್ನುವುದು ತಪ್ಪು ನೀತಿ. ನೀವು ಯುವಜನರಿಗೆ ಮೋಸ ಮಾಡುತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ, ಹೊಸದಾಗಿ ಪರೀಕ್ಷೆ ನಡೆಸಿ ಎಂದು ಭಾಸ್ಕರ ರಾವ್ ಸರ್ಕಾರಕ್ಕೆ ಸಲಹೆ ನೀಡಿದರು.
ಎಸಿಬಿ ಬಲಪಡಿಸಿ
ಎಸಿಬಿ, ಮುಖ್ಯಮಂತ್ರಿ ಹಾಗೂ ಗೃಹಸಚಿವರ ಆದೇಶ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದ ರಾವ್, ಈಶ್ವರಪ್ಪ ಮತ್ತೆ ಸಚಿವರಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತ್ಯೇಕ ಪ್ರಣಾಳಿಕೆ
ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷವಾದರೂ ದಕ್ಷಿಣ ಕನ್ನಡ ಜಿಲ್ಲೆಯ ಮೇಲಿನ ಅವಲಂಬನೆ ಕಡಿಮೆಯಾಗಿಲ್ಲ. ಹಾಗಾದರೆ ಅಭಿವೃದ್ಧಿ ಸಾಧ್ಯವಿಲ್ಲ. ಜಿಲ್ಲೆಗೆ ಸ್ವಂತ ವಿಮಾನ ನಿಲ್ದಾಣ ಹಾಗೂ ಪ್ರತ್ಯೇಕ ಡಿಸಿಸಿ ಬ್ಯಾಂಕಿನ ಅಗತ್ಯವಿದೆ. ಉದ್ಯೋಗ ಸ್ನೇಹಿ ವಾತಾವರಣ ನಿರ್ಮಿಸದಿದ್ದಲ್ಲಿ ಉಡುಪಿ ವೃದ್ಧಾಶ್ರಮ ಆಗಲಿದೆ.
ಆಮ್ ಆದ್ಮಿ ಪಕ್ಷ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಪ್ರಣಾಳಿಕೆ ಜಾರಿಗೊಳಿಸಲಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ದಿವಾಕರ ಸನಿಲ್, ಕಾರ್ಯದರ್ಶಿ ವಿವೇಕಾನಂದ ಸನಿಲ್, ಆಸ್ಲಿನ್ ಕರ್ನೇಲಿಯೋ, ವಿಭಾಗ ಪ್ರಮುಖ ಜೆ. ಪಿ. ರಾವ್, ಅಶೋಕ್ ಎಡಮಲೆ ಇದ್ದರು.