Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊಡ್ಗಿ ನಿಧನಕ್ಕೆ ಪುತ್ತಿಗೆ ಶ್ರೀ ಸಂತಾಪ

ಕೊಡ್ಗಿ ನಿಧನಕ್ಕೆ ಪುತ್ತಿಗೆ ಶ್ರೀ ಸಂತಾಪ

ಸುದ್ದಿಕಿರಣ ವರದಿ
ಮಂಗಳವಾರ, ಜೂನ್ 14

ಕೊಡ್ಗಿ ನಿಧನಕ್ಕೆ ಪುತ್ತಿಗೆ ಶ್ರೀ ಸಂತಾಪ
ಉಡುಪಿ: ಮಾಜಿ ಶಾಸಕ ಎ. ಜಿ. ಕೊಡ್ಗಿ ನಿಧನಕ್ಕೆ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.

ಅವರು ತಮ್ಮ ಶೋಕ ಸಂದೇಶದಲ್ಲಿ `ಎ.ಜಿ. ಕೊಡ್ಗಿಯವರು ಕೊನೆಯುಸಿರೆಳೆದಿರುವ ವಿಚಾರ ತಿಳಿದು ಸಂತಾಪವಾಯಿತು. ಜನ್ಮತಃ ಕೃಷಿಕರಾಗಿ ವಿಶೇಷವಾಗಿ ತನ್ನ ಸಾಧನೆ ಮೆರೆದಿರುವವರು. ಸಹಕಾರಿ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ರಾಜಕೀಯ ರಂಗದಲ್ಲೂ ವಿವಿಧ ಹುದ್ದೆಗಳನ್ನು ಅಲಂಕರಿಸಿ ಆ ಕ್ಷೇತ್ರದಲ್ಲಿ ವಿಶೇಷ ಅಭಿವೃದ್ಧಿಯನ್ನೂ ತಂದಿದ್ದರು. ನಿವೃತ್ತಿಯ ಜೀವನದಲ್ಲಿ ತಮ್ಮೂರು ಅಮಾಸೆಬೈಲು ಅಭಿವೃದ್ಧಿಗೆ ಬಹಳಷ್ಟು ಸೇವೆ ಅವರಿಂದ ಸಂದಿದೆ.

ಧಾರ್ಮಿಕ ಮನೋಭಾವ ಹೊಂದಿದ್ದ ಕೊಡ್ಗಿಯವರು ಉತ್ತಮ ಸಂಘಟಕರೂ ಆಗಿದ್ದ ಕಾರಣ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಗಳಲ್ಲಿ ಕುಂದಾಪುರದ ಕಡೆಯಿಂದ ವೈಭವದ ಹೊರೆಕಾಣಿಕೆ ಸಮರ್ಪಿಸಿ ಪರ್ಯಾಯೋತ್ಸವಕ್ಕೆ ವಿಶೇಷ ಮೆರುಗು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಮ್ಮ ಮೂರೂ ಪರ್ಯಾಯಗಳಲ್ಲೂ ಹೊರೆಕಾಣಿಕೆಯ ವಿಭಾಗದಲ್ಲಿ ವಿಶೇಷ ಸೇವೆ ಸಲ್ಲಿಸಿರುವುದನ್ನು ಈ ಸಂದರ್ಭದಲ್ಲಿ ಅಭಿಮಾನದಿಂದ ಸ್ಮರಿಸುತ್ತಿದ್ದೇವೆ. ಅಂಥ ಸಾಧಕ ಸಚ್ಚೇತನಕ್ಕೆ ಉಡುಪಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣರು ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!