ಸುದ್ದಿಕಿರಣ ವರದಿ
ಭಾನುವಾರ, ಮೇ 22
ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ನವ ದಂಪತಿ ಆತ್ಮಹತ್ಯೆ
ಬ್ರಹ್ಮಾವರ: ಬೆಂಗಳೂರಿನ ನವ ವಿವಾಹಿತ ದಂಪತಿ ಕಾರಿನಲ್ಲಿ ಕುಳಿತುಕೊಂಡು ಸ್ವತಃ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಮಂದಾರ್ತಿ ಬಳಿ ಕಳೆದ ರಾತ್ರಿ ಸಂಭವಿಸಿದ್ದು, ಭಾನುವಾರ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು ಹೆಬ್ಬಾಳದ ಜ್ಯೋತಿ ಹಾಗೂ ಯಶವಂತ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಅವರ ಮದುವೆಗೆ ಎರಡೂ ಮನೆಯವರ ವಿರೋಧ ಇತ್ತು ಎನ್ನಲಾಗಿದೆ. ಆದ್ದರಿಂದ ಅವರು ಮನೆಯವರಿಗೆ ತಿಳಿಸದೇ ಪ್ರೇಮ ವಿವಾಹವಾಗಿದ್ದರು.
ಕಳೆದ ಎರಡು ದಿನದ ಹಿಂದೆ ಇಬ್ಬರೂ ನಾಪತ್ತೆಯಾಗಿದ್ದು, ಇಂಟರ್ ವ್ಯೂಗೆ ಹೋಗಿ ಬರುವುದಾಗಿ ಜ್ಯೋತಿ ಮನೆಯಿಂದ ತೆರಳಿದ್ದಳು. ಟ್ಯಾಲಿ ಕ್ಲಾಸ್ ಗೆ ಹೋಗಿಬರುತ್ತೇನೆಂದು ಯಶವಂತ್ ಮನೆಯಿಂದ ಹೋಗಿದ್ದ.
ಆದರೆ, ಇಬ್ಬರೂ ಮನೆಗೆ ಬಾರದ ಕಾರಣ ಪೋಷಕರು ಹೆಬ್ಬಾಳ ಪೋಲಿಸ್ ಠಾಣೆಗೆ ದೂರು ನೀಡಿದ್ದರು.
ಈರ್ವರೂ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಮನೆಯವರಿಗೆ ಮೊಬೈಲ್ ಸಂದೇಶ ಕಳಿಸಿದ್ದರು!
ಸುಟ್ಟು ಕರಕಲಾದ ಕಾರು
ಬ್ರಹ್ಮಾವರ ಸಮೀಪದ ಮಂದಾರ್ತಿ ಬಳಿಯ ಹೆಗ್ಗುಂಜ್ಜೆಯಲ್ಲಿ ಸುಟ್ಟು ಕರಕಲಾದ ಕಾರು ಮುಂಜಾನೆ ಪತ್ತೆಯಾಗಿದ್ದು, ರಾತ್ರಿ 3 ಗಂಟೆ ಸುಮಾರಿಗೆ ಕಾರು ಸುಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದರು.
ದಂಪತಿಗಳೀರ್ವರೂ ಕಳೆದ ರಾತ್ರಿ ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಕಾರು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದ್ದು, ಸ್ವತಃ ಡ್ರೈವ್ ಮಾಡಿಕೊಂಡು ಬರುತ್ತಿದ್ದ ಕಾರಿನೊಳಗೆ ಕುಳಿತುಕೊಂಡು ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ