ವಿಶಾಲ ಗಾಣಿಗ ಕೊಲೆ ಪ್ರಕರಣ: ಪೊಲೀಸ್ ತಂಡಕ್ಕೆ ಪುರಸ್ಕಾರ ವಿತರಣೆ
(ಸುದ್ದಿಕಿರಣ ವರದಿ)
ಉಡುಪಿ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿ, ಪ್ರಕರಣ ಭೇದಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ ಗುರುವಾರ ಇಲ್ಲಿನ ಎಸ್.ಪಿ. ಕಚೇರಿಯಲ್ಲಿ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.
ಜು. 12ರಂದು ವಿಶಾಲ ಗಾಣಿಗ ಅವರನ್ನು ಉಪ್ಪಿನಕೋಟೆ ಮಿಲನ್ ರೆಸಿಡೆನ್ಸಿ ಅಪಾರ್ಟ್ ಮೆಂಟಿನ ವಾಸದ ಫ್ಲ್ಯಾಟ್ ನಲ್ಲಿಯೇ ಸುಫಾರಿ ಕಿಲ್ಲರುಗಳು ಹತ್ಯೆ ಮಾಡಿದ್ದರು. ಆರೋಪಿ ಚಾಕಚಕ್ಯತೆ ಮೆರದು ಕೊಲೆ ಮಾಡಿದ್ದರಿಂದ ಭೇದಿಸುವುದು ಕ್ಲಿಷ್ಟಕರವಾಗಿ, ಸಾರ್ವಜನಿಕ ವಲಯದಲ್ಲಿ ಸಂಚಲನವುಂಟುಮಾಡಿತ್ತು.
ಉಡುಪಿ ಜಿಲ್ಲಾ ಎಸ್.ಪಿ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಸ್ವಾಮಿನಾಥನ್ ನಿಶಾದ್ ಎಂಬಾತನನ್ನು ಬಂಧಿಸಿದ ನಂತರ, ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗ ಎಂಬಾತನೇ ಪತ್ನಿಯ ಕೊಲೆಗೆ ಸುಫಾರಿ ನೀಡಿದ್ದ ವಿಷಯ ಬಹಿರಂಗಗೊಂಡಿತ್ತು.
ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಕರ್ನಾಟಕ ರಾಜ್ಯ ಡಿ.ಜಿ ಮತ್ತು ಐ.ಜಿ.ಪಿ ಪ್ರವೀಣ್ ಸೂದ್ 50 ಸಾವಿರ ನಗದು ಪುರಸ್ಕಾರ ಘೋಷಿಸಿದ್ದರು. ಆ ಪುರಸ್ಕಾರವನ್ನು ಹಸ್ತಾಂತರಿಸಲಾಯಿತು.
ಎಸ್.ಪಿ. ವಿಷ್ಣುವರ್ಧನ್, ಹೆಚ್ಚುವರಿ ಎಸ್.ಪಿ ಕುಮಾರಚಂದ್ರ, ಡಿ.ವೈ.ಎಸ್.ಪಿ. ಸುಧಾಕರ ನಾಯಕ್, ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಮಣಿಪಾಲ ಪಿ.ಎಸ್.ಐ. ಮಂಜುನಾಥ ಗೌಡ, ಮಲ್ಪೆ ಸಿಪಿಐ ಶರಣ್ ಗೌಡ, ಕಾರ್ಕಳ ಸಿ.ಪಿ.ಐ ಸಂಪತ್ ಕುಮಾರ್ ಹಾಗೂ ಪಿ.ಎಸ್.ಐಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್ ಮತ್ತು ರಾಘವೇಂದ್ರ, ಸಿ.ಡಿ.ಅರ್ ವಿಭಾಗದ ಸಿಬ್ಬಂದಿಗಳಾದ ಶಿವಾನಂದ, ದಿನೇಶ್ ಮತ್ತು ನಿತಿನ್ ಅವರನ್ನು ಅಭಿನಂದಿಸಲಾಯಿತು