Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಧಾನಿ `ಪರೀಕ್ಷಾ ಪೇ ಚರ್ಚಾ'ಗೆ ಉಡುಪಿ ಜಿಲ್ಲೆಯ ಅನುಷಾ ಆಯ್ಕೆ

ಪ್ರಧಾನಿ `ಪರೀಕ್ಷಾ ಪೇ ಚರ್ಚಾ’ಗೆ ಉಡುಪಿ ಜಿಲ್ಲೆಯ ಅನುಷಾ ಆಯ್ಕೆ

ಕುಂದಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಆಲ್ಬಾಡಿ- ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನುಷಾ ಆಯ್ಕೆ ಆಗಿದ್ದಾರೆ.

ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಪಾಲ್ಗೊಳ್ಳಲು 10 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 1,500 ಮಂದಿ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗಿದೆ. ಅವರು ಕಾರ್ಯಕ್ರಮದ ಪ್ರೇಕ್ಷಕರಾಗಿ ಭಾಗವಹಿಸುವ ಅರ್ಹತೆ ಪಡೆದಿದ್ದು, ಅವರಲ್ಲಿ 30 ಮಂದಿ ಪ್ರಧಾನಿ ಜೊತೆ ನೇರ ಸಂವಾದ ನಡೆಸಲು ಆಯ್ಕೆಯಾಗಿದ್ದಾರೆ.

ರಾಜ್ಯದಿಂದ ಇಬ್ಬರು ಆಯ್ಕೆಯಾಗಿದ್ದು, ಬೆಂಗಳೂರಿನ ಓರ್ವ ವಿದ್ಯಾರ್ಥಿ ಮತ್ತು ಉಡುಪಿ ಜಿಲ್ಲೆಯಿಂದ ಅನುಷಾ ಆಯ್ಕೆಯಾದ ಮೊತ್ತೊಬ್ಬ ವಿದ್ಯಾರ್ಥಿನಿ.

ಯಾರೀ ಅನುಷಾ?
ಮಡಾಮಕ್ಕಿ ನಿವಾಸಿ ಕೃಷ್ಣ ಕುಲಾಲ್ ಮತ್ತು ಜಯಲಕ್ಷ್ಮೀ ಕೆ. ಕುಲಾಲ್ ದಂಪತಿಯ ನಾಲ್ವರು ಹೆಣ್ಣುಮಕ್ಕಳಲ್ಲಿ ಅನುಷಾ ಕಿರಿಯವಳು. ಕೃಷ್ಣ ಕುಲಾಲ್ ಗಾರೆ ಕೆಲಸಗಾರರಾಗಿದ್ದು, ತಾಯಿ ಜಯಲಕ್ಷ್ಮಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಷ್ಟಪಟ್ಟು ತಮ್ಮ ನಾಲ್ವರು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿದ್ದು, ಅನುಷಾ ಪ್ರತಿಭಾವಂತ ವಿದ್ಯಾರ್ಥಿನಿ ಎಂದು ಗುರುತಿಸಿಕೊಂಡಿದ್ದಾಳೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ ಮರಕಾಲ ಹಾಗೂ ಶಿಕ್ಷಕರ ಪ್ರೇರಣೆ ಸಿಕ್ಕಿದ್ದು, ಮುಂದೆ ಇಂಜಿನಿಯರಿಂಗ್ ಮಾಡುವ ಆಸೆ ಇದೆ. ಪ್ರಧಾನಿ ಜೊತೆ ಶಿಕ್ಷಣಕ್ಕೆ ಸಹಕಾರ ಮಾಡುವಂತೆ ವಿನಂತಿಸುತ್ತೇನೆ. ಹೆಣ್ಣು ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿ ಸರ್ಕಾರವೇ ವಹಿಸಿಕೊಳ್ಳುವುದರೊಂದಿಗೆ ಉಚಿತ ಶಿಕ್ಷಣ ಸಿಗಬೇಕು. ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತುಕೊಡುವ ಮೂಲಕ ಆಸಕ್ತಿಗನುಗುಣವಾಗಿ ಹೆಚ್ಚಿನ ಪರಿಣತಿ ಪಡೆಯಲು ಉತ್ತೇಜನ ಕೊಡಬೇಕು. ಪುರುಷರ ಸರಿಸಮನಾಗಿ ನಿಲ್ಲುವ ಅಕಾಶ ಹೆಣ್ಣು ಮಕ್ಕಳಿಗೆ ಇನ್ನಷ್ಟು ಹೆಚ್ಚಬೇಕು. ಯಾವುದೇ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಮೂಲಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆ ಇನ್ನಷ್ಟು ಬೆಳೆಯಲು ಅನುಕೂಲ ಕಲ್ಪಿಸಬೇಕು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ತ್ವರಿತ ತನಿಖೆ ನಡೆಸಿ, ಶಿಕ್ಷೆ ಸಿಗುವಂತೆ ಆಗಬೇಕು ಎಂದು ಅನುಷಾ ಆಶಿಸಿದ್ದಾಳೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!