Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಸೈಂಟ್ ಮೇರಿಸ್ ಪ್ರವಾಸಿಗರ ರಕ್ಷಣೆಗೆ ಕ್ರಮ

ಸೈಂಟ್ ಮೇರಿಸ್ ಪ್ರವಾಸಿಗರ ರಕ್ಷಣೆಗೆ ಕ್ರಮ

ಸುದ್ದಿಕಿರಣ ವರದಿ
ಸೋಮವಾರ, ಏಪ್ರಿಲ್ 25

ಸೈಂಟ್ ಮೇರಿಸ್ ಪ್ರವಾಸಿಗರ ರಕ್ಷಣೆಗೆ ಕ್ರಮ
ಉಡುಪಿ: ಮಲ್ಪೆ ಸಮೀಪದ ಸೈಂಟ್ ಮೇರಿಸ್ ದ್ವೀಪದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.

ಸೋಮವಾರ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸೈಂಟ್ ಮೇರಿಸ್ ದ್ವೀಪದಲ್ಲಿ ಈಚೆಗೆ ಸಂಭವಿಸಿದ ದುರಂತ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಅಧ್ಯಕ್ಷತೆಯಲ್ಲಿ ಕಳೆದ ಶನಿವಾರ ಸಭೆ ಕರೆಯಲಾಗಿದ್ದು, ಪ್ರವಾಸಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಅಪೂರ್ವವಾದ ಈ ದ್ವೀಪವನ್ನು ಮೋಜಿಗಿಂತಲೂ ಅಧ್ಯಯನ ಮತ್ತು ಕುತೂಹಲ ದೃಷ್ಟಿಯಿಂದ ವೀಕ್ಷಿಸಬೇಕಾಗಿದೆ. ಆದರೂ ಪ್ರವಾಸಿಗರ ರಕ್ಷಣೆಗಾಗಿ ಸೂಚನಾ ಫಲಕ ಅಳವಡಿಕೆ, ಹೆಚ್ಚುವರಿ ಭದ್ರತಾ ಸಿಬಂದಿ ನೇಮಕ, ಸೆಲ್ಫಿ ತೆಗೆಯಲು ಅನುಕೂಲವಾಗುವಂತೆ ಸ್ಥಳ ನಿಗದಿ ಇತ್ಯಾದಿಗಳನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದರು.

ಉಡುಪಿ ನಗರದ ಮಠದಬೆಟ್ಟು ಪರಿಸರದಲ್ಲಿ ಬಾವಿಗಳಿಗೆ ನಗರ ತ್ಯಾಜ್ಯ ಸೇರಿಕೊಂಡು ದುರ್ನಾತ ಬೀರುತ್ತಿರುವುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಈ ಬಗ್ಗೆ ನೀರಾವರಿ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಕೋವಿಡ್ ತಡೆಗೆ ಲಸಿಕೆಯೊಂದೇ ಪರಿಹಾರವಾಗಿದ್ದು ಲಸಿಕೆ ನೀಡಿಕೆಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಎರಡು ಡೋಸ್ ಲಸಿಕೆ ಪಡೆದ ಹಿರಿಯ ನಾಗರಿಕರಿಗೆ ಹೆಚ್ಚುವರಿ ಡೋಸ್ ಲಸಿಕೆ ನೀಡಲು ಪ್ರೋತ್ಸಾಹಿಸಲಾಗುತ್ತಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಈ ತಿಂಗಳ 27ರಂದು ಪ್ರಧಾನಿ ಮೋದಿ ಅವರು ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಸಂಬಂಧ ಮಾತನಾಡಲಿದ್ದು, ಆ ಬಳಿಕ ಸರ್ಕಾರ ಹೊರಡಿಸುವ ಆದೇಶವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾ, ವಾರ್ತಾಧಿಕಾರಿ ಮಂಜುನಾಥ, ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!