ಫಿಟ್ ರಹೋ ಉಡುಪಿ ಓಟಕ್ಕೆ ಚಾಲನೆ
(ಸುದ್ದಿಕಿರಣ ವರದಿ)
ಉಡುಪಿ: ಟೀಮ್ ನೇಶನ್ ಫಸ್ಟ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಉಡುಪಿಯ ಒಟ್ಟು 100 ಗ್ರಾಮಗಳಲ್ಲಿ ಹಾದುಹೋಗುವ ಫಿಟ್ ರಹೋ ಉಡುಪಿ 75 ಕಿ. ಮೀ. ಓಟಕ್ಕೆ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಉಡುಪಿ ಶೋಕಮಾತಾ ಇಗರ್ಜಿ ಧರ್ಮಗುರು ವಂ| ಚಾರ್ಲ್ಸ್ ಮಿನೇಜಸ್ ಹಸಿರು ನಿಶಾನೆ ತೋರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು.
ನಮ್ಮ ಶರೀರ ಆರೋಗ್ಯವಾಗಿರಬೇಕಿದ್ದಲ್ಲಿ ವ್ಯಾಯಾಮ ಅಗತ್ಯವಾಗಿದೆ. ಇಂದು ಭಾರತವನ್ನು ಯೋಗದಲ್ಲಿ ವಿಶ್ವದಲ್ಲಿ ಗುರುತಿಸಿದೆ. ಇಂಥ ಓಟಗಳ ಮೂಲಕ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ದೇಶದಲ್ಲಿ ತಾಂಡವವಾಡುತ್ತಿರುವ ಕೊರೊನಾ ಸಮಸ್ಯೆ ಮತ್ತು ತಾಲಿಬಾನಿ ಉಗ್ರರ ಸಮಸ್ಯೆ ದೂರವಾಗಲಿ. ನಮ್ಮ ಸೈನಿಕರಿಗೆ ಧೈರ್ಯ ತುಂಬುವ ಕೆಲಸ ನಡೆಯಲಿ ಎಂದು ಪಲಿಮಾರು ಶ್ರೀಪಾದರು ಹಾರೈಸಿದರು.
ಯುವಜನರು ಇಂದು ಕೆಟ್ಟ ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಇಂಥ ಓಟಗಳು ಪ್ರಯೋಜನಕಾರಿ. ಯುವಜನರು ಇಂದು ಭಾರತವನ್ನು ಮುನ್ನಡೆಸಬೇಕಾಗಿದ್ದು ಪ್ರಧಾನಿ ಆಶಯವನ್ನು ಓಟದ ಮೂಲಕ ಸಫಲಗೊಳಿಸುವುದರೊಂದಿಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳೋಣ ಎಂದು ಫಾ| ಚಾರ್ಲ್ಸ್ ಮಿನೇಜಸ್ ನುಡಿದರು.
ಶಾಸಕ ರಘುಪತಿ ಭಟ್, ಪೂರ್ಣಪ್ರಜ್ಞ ಕಾಲೇಜು ಪ್ರಾಂಶುಪಾಲ ಡಾ| ರಾಘವೇಂದ್ರ ಎ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸ್ಥಳೀಯ ನಗರಸಭಾ ಸದಸ್ಯ ಟಿ. ಜಿ. ಹೆಗ್ಡೆ ಹಾಗೂ ನೇಶನ್ ಫಸ್ಟ್ ತಂಡದ ಸೂರಜ್ ಕಿದಿಯೂರು ಮೊದಲಾದವರಿದ್ದರು.