Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊರೊನಾ ತೀವ್ರತೆ ನಡುವೆಯೂ ಮುಖ್ಯಮಂತ್ರಿ ಬದಲಾವಣೆ ಕೂಗು ವಿಪರ್ಯಾಸ

ಕೊರೊನಾ ತೀವ್ರತೆ ನಡುವೆಯೂ ಮುಖ್ಯಮಂತ್ರಿ ಬದಲಾವಣೆ ಕೂಗು ವಿಪರ್ಯಾಸ

ಉಡುಪಿ: ಒಂದೆಡೆ ಇಡೀ ದೇಶದಲ್ಲಿ ಕೊರೊನಾ ತಾಂಡವವಾಡುತ್ತಾ ಮರಣ ಮೃದಂಗ ಬಾರಿಸುತ್ತಿದ್ದರೆ, ಇತ್ತ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯಲ್ಲಿ ಬಿಜೆಪಿ ವ್ಯಸ್ತವಾಗಿರುವುದು ನಿಜಕ್ಕೂ ವಿಪರ್ಯಾಸ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಖೇದ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಈ ನಡೆ ರೋಮ್ ನಗರ ಹೊತ್ತಿ ಉರಿಯುತ್ತಿರುವ ಸಂದರ್ಭ ಚಕ್ರವರ್ತಿ ನೀರೊ ಪಿಟೀಲು ಬಾರಿಸುತ್ತಿದ್ದುದ್ದನ್ನು ನೆನಪಿಸುವಂತಿದೆ ಎಂದವರು ಕುಹಕವಾಡಿದ್ದಾರೆ.

ಕೊರೊನಾದಿಂದಾಗಿ ದಿನೇ ದಿನೇ ಸಹಸ್ರಾರು ಸಾವು ಸಂಭವಿಸುತ್ತಿದ್ದರೂ, ಅಸಮರ್ಪಕ ಆಕ್ಸಿಜನ್ ಸರಬರಾಜು, ಬೆಡ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ವ್ಯಾಕ್ಸಿನ್ ಮತ್ತು ಔಷಧ ಸರಬರಾಜಿನಿಂದಾಗಿ ರಾಜ್ಯದ ಜನತೆ ಪಡುತ್ತಿದ್ದ ಬವಣೆ ಕಂಡು ತಾಳಲಾರದೆ ಉಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಛೀಮಾರಿ ಹಾಕಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಆದರೂ ತನಗಾದ ಮುಖಭಂಗ ತಪ್ಪಿಸಲು ಉಚ್ಚನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಸಲ್ಲಿಸಿದ್ದ ಸರ್ಕಾರದ ಮೇಲ್ಮನವಿಗೆ ಹಿನ್ನಡೆಯಾಗಿ ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದಿರುವುದು ತೀವ್ರ ಮುಖಭಂಗ ಅನುಭವಿಸುವಂತಾಗಿತ್ತು.

ಇದೆಲ್ಲ ಬೆಳವಣಿಗೆ ಗಮನಿಸುತ್ತಿದ್ದ ಬಿಜೆಪಿ ಹೈಕಮಾಂಡ್, ಪಕ್ಷಕ್ಕಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಮತ್ತು ಹಾನಿಯಾದ ವರ್ಚಸ್ಸು ಸರಿಪಡಿಸುವ ಕಾರಣ ಮುಂದಿಟ್ಟು ಇದೀಗ ಮುಖ್ಯಮಂತ್ರಿ ಬದಲಾವಣೆಗೆ ಹೊರಟಿರುವುದು ಬಿಜೆಪಿ ಜನಪರ ಕಾಳಜಿ ಇಲ್ಲದ, ಅಧಿಕಾರದಾಹಿ ಪಕ್ಷ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸೊರಕೆ ಹೇಳಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಲ್ಲೊಬ್ಬರಾದ ಡಿ. ವಿ. ಸದಾನಂದ ಗೌಡ, ಕೇಂದ್ರದಿಂದ ರಾಜ್ಯಕ್ಕೆ ದೊರಕಬೇಕಾದ ಎಲ್ಲಾ ಕೋವಿಡ್ ನಿರ್ವಹಣಾ ಸೌಲಭ್ಯ ಕುರಿತಂತೆ ಹೊಣೆಗೇಡಿತನದ ಹೇಳಿಕೆ ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಪಾಲಿಗೆ ನ್ಯಾಯಯುತವಾಗಿ ಬರಬೇಕಿದ್ದ ಜಿ.ಎಸ್.ಟಿ ಸಂಗ್ರಹದ ಸಹಸ್ರಾರು ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡದೆ ವಂಚಿಸಿದೆ.

ಕಳೆದ ಎರಡು- ಮೂರು ವರ್ಷದಿಂದ ರಾಜ್ಯ ತೀವ್ರ ಅತಿವೃಷ್ಟಿ- ಅನಾವೃಷ್ಟಿಗೆ ತುತ್ತಾಗಿದ್ದರೂ ಇನ್ನೂ ಪರಿಹಾರ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಷ್ಟಾದರೂ ರಾಜ್ಯದ ಸಂಸದರು ರಾಜ್ಯದ ಹಿತಾಸಕ್ತಿ ಕುರಿತಂತೆ ಪ್ರಧಾನಿ ಮುಂದೆ ಗಟ್ಟಿ ಧ್ವನಿ ಎತ್ತಲು ಏಕೆ ಹಿಂಜರಿಯುತ್ತಿದ್ದಾರೆ ಎಂದು ಸೊರಕೆ ಪ್ರಶ್ನಿಸಿದ್ದಾರೆ.

ಸರ್ಕಾರ ಸೋಂಕಿತರು ಮತ್ತು ಮೃತರಾದವರ ನೈಜ ಅಂಕಿಅಂಶ ಮರೆಮಾಚುತ್ತಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಸೊರಕೆ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗೆ ಸಲಹೆ ಸಹಕಾರ ನೀಡಿ ಸರ್ಕಾರ ಮುನ್ನಡೆಸಲು ಬೆಂಬಲಿಸುವ ಬದಲು ಮುಖ್ಯಮಂತ್ರಿ ಬದಲಾಯಿಸಿ ತಮ್ಮ ಆಪ್ತೇಷ್ಠರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಹೈಕಮಾಂಡ್ ಹುನ್ನಾರ ಅಧಿಕಾರ ದಾಹದ ಪರಮಾವಧಿ ಎಂದು ವಿಶ್ಲೇಷಿಸಿದ್ದಾರೆ.

ಅನೇಕ ಶಾಸಕರು, ಸಂಸದರು ಮತ್ತು ಬಿಜೆಪಿ ಹಿರಿಯ ನಾಯಕರು ಅನೇಕ ಬಾರಿ ಗುಪ್ತ ಸಭೆಗಳನ್ನು ನಡೆಸಿರುವುದು, ಈಗಲೂ ಹಲವಾರು ಶಾಸಕರು ದೆಹಲಿಯಲ್ಲಿ ಹೈಕಮಾಂಡ್ ಕದ ತಟ್ಟುತ್ತಿರುವುದು ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆಯ ಭಾಗವಾಗಿದ್ದಂತೆ ಕಂಡುಬಂದರೆ, ರಾಜ್ಯದಲ್ಲಿ ಚುನಾಯಿತ ಶಾಸಕಾಂಗದ ಪ್ರತಿನಿಧಿಗಳ ಸರ್ಕಾರ ಅಸ್ತಿತ್ವದಲ್ಲಿದ್ದರೂ ಈಚೆಗೆ ಕೇಂದ್ರ ಸರ್ಕಾರ ರಾಜ್ಯಾಪಾಲರಿಗೆ ಸೂಚನೆ ನೀಡಿ ಕೋವಿಡ್ ನಿರ್ವಹಣೆ ಸಭೆ ನಡೆಸಿರುವುದು ಮುಖ್ಯಮಂತ್ರಿ ಆಡಳಿತ ವೈಖರಿಯಲ್ಲಿ ಕೇಂದ್ರ ತೃಪ್ತಿ ಹೊಂದಿಲ ಎನ್ನುವುದಕ್ಕೆ ಸಾಕ್ಷಿ. ಇದು ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ ಎಂದು ವಿನಯಕುಮಾರ್ ಸೊರಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!