Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಬಸ್ತಿ ವಾಮನ ಶೆಣೈ ಇನ್ನಿಲ್ಲ

ಬಸ್ತಿ ವಾಮನ ಶೆಣೈ ಇನ್ನಿಲ್ಲ

ಸುದ್ದಿಕಿರಣ ವರದಿ
ಭಾನುವಾರ, ಜನವರಿ 2, 2022
ಬಸ್ತಿ ವಾಮನ ಶೆಣೈ ಇನ್ನಿಲ್ಲ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಭಾನುವಾರ ಮಧ್ಯಾಹ್ನ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಅವರು ಕಳೆದ ಸುಮಾರು ಎರಡು ತಿಂಗಳಿಂದ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ವಿಶ್ವ ಕೊಂಕಣಿ ಸರದಾರ ಎಂದೇ ಹೆಸರಾಗಿದ್ದ ಬಸ್ತಿ ವಾಮನ ಶೆಣೈ ಇಲ್ಲಿನ ಶಕ್ತಿನಗರದಲ್ಲಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಕೇಂದ್ರ ಸ್ಥಾಪಿಸಿದ್ದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿದ್ದರು.

ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ಅವರು ನಿವೃತ್ತಿ ಬಳಿಕ ತನ್ನ ಜೀವಿತವನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿದ್ದರು.

ಮೃತರು ಈರ್ವರು ಪುತ್ರರು ಹಾಗೂ ಒಬ್ಬಾಕೆ ಮಗಳನ್ನು ಅಗಲಿದ್ದಾರೆ.

ಸಂತಾಪ
ಬಸ್ತಿ ವಾಮನ ಶೆಣೈ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೊಂಕಣಿ ಸಾಹಿತ್ಯ ಲೋಕದ ದಿಗ್ಗಜ, ಅಪ್ರತಿಮ ಸಂಘಟಕ, ವಿಶ್ವ ಕೊಂಕಣಿ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದ ಬಸ್ತಿ ವಾಮನ ಶೆಣೈ ನಿಧನ ಕೊಂಕಣಿ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎನಿಸಿದೆ ಎಂದು ಕುಯಿಲಾಡಿ ಕಂಬನಿ ಮಿಡಿದಿದ್ದಾರೆ.

ಯಕ್ಷಗಾನ ಕಲಾರಂಗ ಕಂಬನಿ
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾಗಿ‌‌ ಆ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಈಚೆಗೆ ಅದರ ಗೌರವಾಧ್ಯಕ್ಷರಾಗಿ ನಿಯುಕ್ತರಾದ ಬಸ್ತಿ ವಾಮನ ಶೆಣೈ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗ ಕಂಬನಿ ಮಿಡಿದಿದೆ.

ನಮ್ಮ ಸಂಸ್ಥೆಯ ವಿದ್ಯಾಪೋಷಕ್ ವಿಭಾಗದ ಕಾರ್ಯಚಟುವಟಿಕೆ ಮೆಚ್ಚಿಕೊಂಡು ವಿಶೇಷ ರೀತಿಯಲ್ಲಿ ಪ್ರೋತ್ಸಾಹಿಸುತ್ತಾ ಬಂದಿದ್ದರು.

ಸಿಂಡಿಕೇಟ್ ಬ್ಯಾಂಕ್‌ ಅಧಿಕಾರಿಯಾಗಿದ್ದ‌‌ ಅವರು ನಿವೃತ್ತಿಯ ಆನಂತರದ ತಮ್ಮ ಬದುಕನ್ನು ಸಮಾಜದ ಒಳಿತಿಗೆ ಸಮರ್ಪಿಸಿಕೊಂಡಿದ್ದರು.

ಮುಖ್ಯವಾಗಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಅಪಾರ. ಸದಾ ಉತ್ಸಾಹದ ಚಿಲುಮೆಯಾಗಿ ಎಲ್ಲರಿಗೆ ಮಾದರಿಯಾಗಿದ್ದರು ಎಂದು ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಳಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!