ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6
ಸಿದ್ಧರಾಮಯ್ಯ ಹುಟ್ಟುಹಬ್ಬ ಆಚರಣೆಗೆ ಬಿಜೆಪಿ ಟೀಕೆ ಖಂಡನೀಯ
ಉಡುಪಿ: ಈಚೆಗೆ ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಕುರಿತಂತೆ ಬಿಜೆಪಿ ನಡೆಸುತ್ತಿರುವ ಟೀಕೆ ಮತ್ತು ಅಪಪ್ರಚಾರ ಖಂಡನೀಯ. ಅದು ಅವರ ಚಿಲ್ಲರೆ ರಾಜಕಾರಣವನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೊ ಹೇಳಿದ್ದಾರೆ.
ಆಗಸ್ಟ್ 3ರಂದು ನಡೆದ ವಿಪಕ್ಷ ನಾಯಕ ಸಿದ್ಧರಾಮಯ್ಯ 75ನೇ ವರ್ಷದ ಹುಟ್ಟುಹಬ್ಬಕ್ಕೆ ಆಯೋಜಕರ ನಿರೀಕ್ಷೆಗೂ ಮೀರಿ ಜನಸ್ತೋಮ ಸೇರಿದ್ದು, ಪ್ರಸ್ತುತ ಬಿಜೆಪಿ ಸರಕಾರದ ವಿರುದ್ಧ ತಮ್ಮ ಅಂತರಾಳದಲ್ಲಿದ್ದ ಆಕ್ರೋಶವನ್ನು ಶಾಂತಿಯುತವಾಗಿ ಪ್ರದರ್ಶಿಸಿದ್ದಾರೆ.
ಸಿದ್ದರಾಮಯ್ಯ ಹುಟ್ಟುಹಬ್ಬದಲ್ಲಿ ಭಾಗವಹಿಸಿರುವುದು ಕಾಂಗ್ರೆಸಿಗರ ಪಾಲಿಗೆ ಬಯಸದೆ ಬಂದ ಭಾಗ್ಯವಾಗಿದ್ದು, ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ ನೋಡಿ ಪ್ರತಿಯೊಬ್ಬರೂ ಬೆರಗಾಗಿದ್ದೇವೆ. ಕಾರ್ಯಕ್ರಮದಲ್ಲಿದ್ದ ಜನಸ್ತೋಮ ಕಂಡು ಬಿಜೆಪಿ ನಾಯಕರು ಮಾಧ್ಯಮದ ಮೂಲಕ ಅಪಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದ.
ಲಕ್ಷೋಪಾದಿಯಲ್ಲಿ ಜನ ಸೇರುವ ನಿರೀಕ್ಷೆ ಇದ್ದರೂ ಆಡಳಿತಾರೂಢ ಬಿಜೆಪಿ ಸರಕಾರ, ಟ್ರಾಫಿಕ್ ನಿಯಂತ್ರಿಸಲು ಯಾವುದೇ ಪೂರ್ವ ತಯಾರಿ ಮಾಡದಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಟ್ರಾಫಿಕ್ ಸುವ್ಯವಸ್ಥೆ ನೆಪದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಸಾವಿರಾರು ವಾಹನಗಳನ್ನು 11 ಕಿ.ಮೀ. ದೂರದಲ್ಲಿಯೇ ನಿಲ್ಲಿಸಿ ಹಿಂದೆ ಕಳಿಹಿಸಲಾಗಿದೆ. ಈ ರೀತಿ ಟ್ರಾಫಿಕ್ ಪೊಲೀಸರು ಕಿರುಕುಳ ನೀಡಿದರೂ ಜನರು ವಾಹನದಿಂದ ಇಳಿದು ಕಾಲ್ನಡಿಗೆ ಮೂಲಕ ಯಾವುದನ್ನು ಲೆಕ್ಕಿಸದೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೀತಿ ಕಂಡಾಗ ಬಿಜೆಪಿ ಸರಕಾರದ ಆಡಳಿತದ ವಿರುದ್ಧ ಜನತೆ ತಿರುಗಿ ಬಿದ್ದಿದ್ದಾರೆ ಎನ್ನುವುದು ಸ್ಪಷ್ಟ ಎಂದು ವೆರೋನಿಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.