Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾನೂನು ಸೇವಾ ಕೇಂದ್ರಗಳ ಮೂಲಕ ಬುಡಕಟ್ಟು ಜನರಿಗೆ ನೆರವು

ಕಾನೂನು ಸೇವಾ ಕೇಂದ್ರಗಳ ಮೂಲಕ ಬುಡಕಟ್ಟು ಜನರಿಗೆ ನೆರವು

ಸುದ್ದಿಕಿರಣ ವರದಿ
ಶುಕ್ರವಾರ, ಮೇ 13

ಕಾನೂನು ಸೇವಾ ಕೇಂದ್ರಗಳ ಮೂಲಕ ಬುಡಕಟ್ಟು ಜನರಿಗೆ ನೆರವು
ಬ್ರಹ್ಮಾವರ: ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವುದು ಹಾಗೂ ಅತೀ ಹಿಂದುಳಿದ ಬುಡಕಟ್ಟು ಸಮುದಾಯದ ಜನರಿಗೆ ಕಾನೂನಿನ ನೆರವು ಒದಗಿಸುವ ಗುರಿಯನ್ನು ಕಾನೂನು ಸೇವೆಗಳ ಕೇಂದ್ರ ಹೊಂದಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಹೇಳಿದರು.

ಶುಕ್ರವಾರ ಚೇರ್ಕಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಜಿಲ್ಲಾ ವಕೀಲರ ಸಂಘ ಉಡುಪಿ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಹಾಗೂ ವಿವಿಧ ಇಲಾಖೆಗಳು ಮತ್ತು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಕುಂಜಿಬೆಟ್ಟು ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಬುಡಕಟ್ಟು ಜನರ ಹಕ್ಕು ಜಾರಿ ಮತ್ತು ಸಂರಕ್ಷಣೆ) ಯೋಜನೆ 2015ರ ಅನುಷ್ಠಾನ ಮತ್ತು ಕಾನೂನು ಸೇವೆಗಳ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸ್ಥಾಪನೆ
ರಾಜ್ಯದಲ್ಲಿ ಅಧಿಕವಾಗಿ ಬುಡಕಟ್ಟು ಸಮುದಾಯ ಕಂಡುಬರುವ ಗ್ರಾಮ ಪಂಚಾಯತ್ ಗಳಲ್ಲಿ ಕಾನೂನು ಸೇವೆಗಳ ಕೇಂದ್ರ ತೆರೆಯಲು ನಿರ್ಧರಿಸಿದ್ದು, ಈಗಾಗಲೇ ರಾಜ್ಯದಲ್ಲಿ ಚಾಮರಾಜನಗರ, ರಾಯಚೂರು, ಚೇರ್ಕಾಡಿ, ಯಲ್ಲಾಪುರಗಳಲ್ಲಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ಬುಡಕಟ್ಟು ಜನರಿಗೆ ಅವರ ಹಕ್ಕುಗಳು ಮತ್ತು ಸರಕಾರದಿಂದ ಅವರಿಗೆ ನೀಡುವ ಯೋಜನೆಗಳ ಕುರಿತು ಮಾಹಿತಿ ನೀಡುವ ಉದ್ದೇಶವನ್ನು ಕಾನೂನು ಸಲಹಾ ಕೇಂದ್ರ ಹೊಂದಿದೆ ಎಂದರು.

ಸೌಲಭ್ಯ ಒದಗಿಸುವ ಚಿಂತನೆ
ಚೇರ್ಕಾಡಿ ಗ್ರಾಮ ಪಂಚಾಯತ್ ನಲ್ಲಿರುವ ಬುಡಕಟ್ಟು ಜನಾಂಗದ ಸಮೀಕ್ಷೆ ಪ್ರಕಾರ ಒಟ್ಟು 1,839 ಮಂದಿ ಬುಡಕಟ್ಟು ಸಮುದಾಯದವರಿದ್ದು, ಅವರಲ್ಲಿ ಇನ್ನೂ ಅನೇಕ ಮಂದಿ ಈವರೆಗೆ ಆಧಾರ್ ಕಾರ್ಡ್, ವೃದ್ಧಾಪ್ಯ ವೇತನ, ಪಡಿತರ ಚೀಟಿ, ಜನನ ಹಾಗೂ ಮರಣ ಪ್ರಮಾಣಪತ್ರದಿಂದ ವಂಚಿತರಾಗಿದ್ದಾರೆ.

ಅಂಥವರನ್ನು ಗುರುತಿಸಿ, ಕಾನೂನಿನಡಿಯಲ್ಲಿ ಅವರಿಗೆ ಸಿಗುವ ಸೌಲಭ್ಯ ಒದಗಿಸುವ ಚಿಂತನೆಯನ್ನು ಕಾನೂನು ಸಲಹಾ ಕೇಂದ್ರ ಮಾಡಲಿದೆ ಎಂದರು.

ರಾಜ್ಯದಲ್ಲಿರುವ ಪ್ರತಿಯೊಂದು ಕಾನೂನು ಕಾಲೇಜುಗಳಲ್ಲಿ ಕಾನೂನು ಸೇವೆಗಳ ಕೇಂದ್ರ ತೆರೆಯುವುದಲ್ಲದೇ, ಒಂದು ಕಾಲೇಜು ಕನಿಷ್ಠ 5 ಗ್ರಾಮಗಳನ್ನು ದತ್ತು ಪಡೆಯಬೇಕು ಹಾಗೂ ಅಲ್ಲಿನ ವಿದ್ಯಾರ್ಥಿಗಳು ಗ್ರಾಮದಲ್ಲಿ ಒಂದು ವಾರಗಳ ಕಾಲ ಸಮೀಕ್ಷೆ ನಡೆಸಿ ಎಲ್ಲಾ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ, ಸಮೀಕ್ಷೆಯ ನಂತರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸಮಕ್ಷಮದಲ್ಲಿ ಅವುಗಳನ್ನು ಎಲ್ಲಾ ಇಲಾಖೆಯವರ ಸಭೆ ನಡೆಸಿ ಆ ಗ್ರಾಮದ ಜನರಿಗೆ ಅಗತ್ಯವಿರುವ ಯೋಜನೆಗಳನ್ನು ತಿಳಿಸುವ ಹಾಗೂ ಒದಗಿಸುವ ಕಾರ್ಯ ಮಾಡಬೇಕು ಎಂದರು.

ಕಾನೂನು ಅರಿವು ಅಗತ್ಯ
ಮುಖ್ಯ ಅತಿಥಿಗಳಾಗಿದ್ದ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಡಾ| ಮೋಹನ ರಾವ್ ನಲ್ವಾಡಿ, ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಮನುಷ್ಯ ಹುಟ್ಟಿನಿಂದ ಸಾಯುವ ತನಕ ಮತ್ತು ಸತ್ತ ನಂತರವೂ ಕಾನೂನು ಚೌಕಟ್ಟಿನಲ್ಲಿರುತ್ತಾನೆ.

ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಭಾರತ ಸಂವಿಧಾನ ಮಹತ್ತರದ್ದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಈ ಕಾನೂನು ಸಲಹಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಮದಲ್ಲೇ  ಮಾಹಿತಿ
ಅಧ್ಯಕ್ಷತೆ ವಹಿಸಿದ್ದ ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಎಸ್. ಭಟ್, ಗ್ರಾಮದಲ್ಲಿ ಕಾನೂನು ಸಲಹಾ ಕೇಂದ್ರದ ಸ್ಥಾಪನೆ ಇಲ್ಲಿನ ಜನರಿಗೆ ಉಪಯುಕ್ತವಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಜನರು ನ್ಯಾಯಾಲಯಕ್ಕೆ ಹೋಗಲು ಅಸಾಧ್ಯ ಎಂದು ಕೈಕಟ್ಟಿ ಕೂರುವ ಪ್ರಮೇಯವಿಲ್ಲ.

ಎಲ್ಲಾ ಮಾಹಿತಿಗಳು ಇಲ್ಲಿಯೇ ದೊರೆಯುವುದರಿಂದ ಗ್ರಾಮಸ್ಥರಿಗೆ ಇದು ಸಹಕಾರಿಯಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ದೂದ್ ಪೀರ್, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ. ಡಾ| ನಿರ್ಮಲಾ ಕುಮಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರಮೂರ್ತಿ, ಗ್ರಾ. ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಚೇರ್ಕಾಡಿ  ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಷ್ ವಂದಿಸಿದರು. ಚೇರ್ಕಾಡಿ ಶಾಲಾ ಶಿಕ್ಷಕಿ ಜಯಶೀಲ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!