Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಮಂದಿರದ ಬದಲಾಗಿ ಸೌಹಾರ್ದ ಸೌಧ ನಿರ್ಮಾಣವಾಗಲಿ

ಮಂದಿರದ ಬದಲಾಗಿ ಸೌಹಾರ್ದ ಸೌಧ ನಿರ್ಮಾಣವಾಗಲಿ

ಸುದ್ದಿಕಿರಣ ವರದಿ
ಶನಿವಾರ, ಮೇ 14

ಮಂದಿರದ ಬದಲಾಗಿ ಸೌಹಾರ್ದ ಸೌಧ ನಿರ್ಮಾಣವಾಗಲಿ
ಉಡುಪಿ: ದೇಶ ಒಡೆದರೆ ಅದಕ್ಕೆ ಪ್ರತಿಯಾಗಿ ದೇಶ ಕಟ್ಟೋಣ, ಮಂದಿರಗಳನ್ನು ಕಟ್ಟಿದರೆ ಬದಲಾಗಿ ಸೌಹಾರ್ದ ಸೌಧ ನಿರ್ಮಿಸೋಣ ಎಂದು ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಕರೆ ನೀಡಿದರು.

ಶನಿವಾರ ಕ್ರಿಶ್ಚಿಯನ್ ಶಾಲಾ ಮೈದಾನದಲ್ಲಿ ಸೌಹಾರ್ದ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಮಾತನಾಡಿದರು.

ಎಲ್ಲರನ್ನೂ ಒಟ್ಟಾಗಿಸುವುದು ದೇಶ ಧರ್ಮ
ಸೌಹಾರ್ದದ ನೆಲವಾಗಿರುವ ಕರಾವಳಿಯಲ್ಲಿ ದ್ವೇಷದ ವಿಷ ಬೀಜ ಬಿತ್ತಲಾಗಿದೆ. ನಾವೆಲ್ಲರೂ ಒಟ್ಟಾಗಿ ವಿಷ ಬೀಜದ ಫಸಲು ಬಿತ್ತಿದವರ ಕೈ ಸೇರದಂತೆ ತಡೆಯಬೇಕಿದೆ.

ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದು ನಿಜವಾದ ದೇಶ ಧರ್ಮ. ಧರ್ಮ ಪಾಲಿಸಲು ಸಾಧ್ಯವಿಲ್ಲದವರಿಗೆ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಇಲ್ಲ.

ದೇಶಪ್ರೇಮಿಗಳು ಯಾರು, ದೇಶದ್ರೋಹಿಗಳು ಯಾರು ಎಂದು ಕೆಲವರು ಪ್ರಮಾಣಪತ್ರ ನೀಡುತ್ತಿದ್ದಾರೆ. ದೇಶ ಕಟ್ಟುವವರು ಮಾತ್ರ ದೇಶಪ್ರೇಮಿಗಳು, ಧರ್ಮ ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವವರು ದೇಶದ್ರೋಹಿಗಳು ಎಂದು ಯಾದವ್ ವಾಗ್ದಾಳಿ ನಡೆಸಿದರು.

ಬುಲ್ಡೋಜರ್ ರಾಜಕಾರಣ
ದೇಶದಲ್ಲಿ ಬುಲ್ಡೋಜರ್ ರಾಜಕಾರಣ ನಡೆಯುತ್ತಿದ್ದು, ಸಂವಿಧಾನದ ಆಶಯಗಳ ಮೇಲೆ ಬುಲ್ಡೋಜರ್ ಹರಿಸಲಾಗುತ್ತಿದೆ. ಪ್ರತಿಯೊಬ್ಬರೂ ಬುಲ್ಡೋಜರ್ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕಿದೆ ಎಂದರು.

ಆಳುವವರ ಕಿಸೆಯಲ್ಲಿ ಮಾಧ್ಯಮಗಳು, ಪೊಲೀಸ್ ಇಲಾಖೆ, ಅಧಿಕಾರ ಇದ್ದರೆ, ನಮ್ಮೊಂದಿಗೆ ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಅಂಬೇಡ್ಕರ್ ನೀಡಿದ ಸಂವಿಧಾನ ಹಾಗೂ ಸೂಫಿ ಪರಂಪರೆ ಇದೆ.

ಮಹಾತ್ಮರ ಸಿದ್ಧಾಂತಗಳನ್ನು ಎಂದಿಗೂ ಸೋಲಲು ಬಿಡಬಾರದು ಎಂದರು.

ಸೌಹಾರ್ದ ಮೆರೆಯಲಿ
ಸಾಮಾಜಿಕ ಹೋರಾಟಗಾರ, ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಉಡುಪಿಯ ಸಹಬಾಳ್ವೆ ಸಮಾವೇಶ ದೇಶದೆಲ್ಲೆಡೆ ವಿಸ್ತರಿಸಲಿ.

ಯುವಜನತೆ ಅದರ ನೇತೃತ್ವ ವಹಿಸಲಿ. ದ್ವೇಷ ಹರಡುವವರಿಗೂ ಪ್ರೀತಿ, ಸೌಹಾರ್ದ ಹಂಚಲಿ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಖಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪುತ್ತೂರು ಮಲಂಕರ ಕ್ಯಾಥೊಲಿಕ್ ಚರ್ಚ್ ನ ಬಿಷಪ್ ವರ್ಗೀಸ್ ಮಾರ್ ಮಕರಿಕೋಸ್, ಮೈಸೂರು ಬಸವ ಜ್ಞಾನ ಮಂದಿರದ ಡಾ| ಮಾತೆ ಬಸವಾಂಜಲಿ, ಬಸವ ಧರ್ಮ ಪೀಠದ ಬಸವ ಪ್ರಕಾಶ ಸ್ವಾಮೀಜಿ, ಲೋಕರತ್ನ ಬುದ್ಧ ವಿಹಾರದ ಭಂತೆ ಮಾತೆ ಮೈತ್ರಿ, ಮೌಲಾನ ಇಪ್ಪಿಕಾರ್ ಅಹ್ಮದ್ ಖಾಸ್ಮಿ, ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ಮೌಲಾನ ಯು. ಕೆ. ಅಬ್ದುಲ್ ಅಝೀಜ್ ದಾರಿಮಿ, ಫಾ| ಚೇತನ್ ಲೋಬೋ, ಗ್ಯಾನಿ ಬಲರಾಜ್ ಸಿಂಗ್ ಮೊದಲಾದವರಿದ್ದರು.

ಸಾಮರಸ್ಯಕ್ಕಾಗಿ ಸೌಹಾರ್ದ ನಡಿಗೆ
ಸಮಾವೇಶಕ್ಕೂ ಮುನ್ನ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹೋರಾಟಗಾರರಾದ ಕೆ. ನೀಲಾ, ನಜ್ಮಾ ಚಿಕ್ಕನರೇರಳೆ, ಮಾವಳ್ಳಿ ಶಂಕರ್, ಚಾಮರಸ ಮಾಲಿ ಪಾಟೀಲ್, ಎಚ್.ಆರ್. ಬಸವರಾಜಪ್ಪ, ಸಬಿಹಾ ಫಾತಿಮಾ ಏಳು ಬಣ್ಣದ ಬಾವುಟಗಳನ್ನು ಎತ್ತಿ ಹಿಡಿಯುವ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಿದರು.

ಅಜ್ಜರಕಾಡು ಹುತಾತ್ಮ ಚೌಕದಿಂದ ಹೊರಟ ನಡಿಗೆ ಜೋಡುಕಟ್ಟೆ, ಕೋರ್ಟ್ ರಸ್ತೆ, ಹಳೆ ಡಯಾನ ವೃತ್ತ, ತ್ರಿವೇಣಿ ಸರ್ಕಲ್, ಕ್ಲಾಕ್ ಟವರ್, ಕಿದಿಯೂರು ಹೋಟೆಲ್, ಸಿಟಿ ಬಸ್ ನಿಲ್ದಾಣ ರಸ್ತೆ, ಸರ್ವಿಸ್ ಬಸ್ ನಿಲ್ದಾಣ ಪಕ್ಕದ ರಸ್ತೆ, ಕ್ಲಾಕ್ ಟವರ್ ಎಡರಸ್ತೆ, ಡಯಾನ ಸರ್ಕಲ್, ಹಳೆ ತಾಲೂಕು ಕಚೇರಿ ವೃತ್ತ, ಮಿಷನ್ ಆಸ್ಪತ್ರೆ ಮಾರ್ಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಂಡಿತು.

ಸಾಮರಸ್ಯದ ನಡಿಗೆಯಲ್ಲಿ ಕಂಬಳದ ಕೋಣ, ಹುಲಿವೇಷ, ಚೆಂಡೆ, ನಾಸಿಕ್ ಬ್ಯಾಂಡ್, ಕಂಗೀಲು ನೃತ್ಯ, ಡೊಳ್ಳು ಕುಣಿತ, ದಫ್ ಹಾಗೂ ನಾಡಿನ ಮಹಾನ್ ವ್ಯಕ್ತಿಗಳಾದ ನಾರಾಯಣ ಗುರು, ಡಾ| ಬಿ. ಆರ್. ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದ, ಮದರ್ ಥೆರೇಸಾ, ಹಾಜಿ ಅಬ್ದುಲ್ಲಾ, ಮಾಧವ ಮಂಗಲ, ಡಾ. ಟಿಎಂಎ ಪೈ, ವಡ್ಡರ್ಸೆ ರಘುರಾಮ ಶೆಟ್ಟಿ ಮೊದಲಾದವರ ಸ್ತಬ್ಧಚಿತ್ರಗಳು ಬಹುತ್ವ ಭಾರತವನ್ನು ಪ್ರತಿಬಿಂಬಿಸುವಂತಿದ್ದವು. ಕರ್ನಾಟಕ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು, ರಾಷ್ಟ್ರಧ್ವಜ ಹಾಗೂ ಏಳು ಬಣ್ಣದ ಪತಾಕೆ ಹಿಡಿದ ಅನೇಕ ಮಂದಿ ಗಮನ ಸೆಳೆದರು.

ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಕೇಸರಿ, ಹಸಿರು, ಕೆಂಪು, ನೀಲಿ, ಬಿಳಿ, ಹಳದಿ ಸೇರಿದಂತೆ ವಿವಿಧ ಬಣ್ಣಗಳ ಪತಾಕೆಗಳು, ಕಟೌಟುಗಳು ರಾರಾಜಿಸುತ್ತಿದ್ದವು. ಕೋರ್ಟ್ ರಸ್ತೆಯಲ್ಲಿರುವ ವೃತ್ತವನ್ನು ಪತಾಕೆಗಳಿಂದ ಶೃಂಗರಿಸಲಾಗಿತ್ತು.

ಬೃಹತ್ ಮೆರವಣಿಗೆ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ 300 ಮಂದಿ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಸಾಗಿಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯು. ಆರ್. ಸಭಾಪತಿ, ಅಮೃತ್ ಶೆಣೈ ಮೊದಲಾದವರು ಭಾಗವಹಿಸಿದ್ದರು.

ಸಂಚಾಲನ ಸಮಿತಿಯ ಸುಂದರ್ ಮಾಸ್ತರ್ ಸ್ವಾಗತಿಸಿದರು. ವಿನಯಾ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುನೀತಾ ಶೆಟ್ಟಿ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!