Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಮಕ್ಕಳ ಮೇಲಿನ ಶೋಷಣೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸಲಹೆ

ಮಕ್ಕಳ ಮೇಲಿನ ಶೋಷಣೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸಲಹೆ

ಮಕ್ಕಳ ಮೇಲಿನ ಶೋಷಣೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸಲಹೆ

ಉಡುಪಿ, ನ. 14 (ಸುದ್ದಿಕಿರಣ ವರದಿ): ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು, ಬಾಲ್ಯ ವಿವಾಹಗಳಿಗೊಳಪಡಿಸುವುದು ಸೇರಿದಂತೆ ಮಕ್ಕಳ ಮೇಲೆ ನಡೆಯುವ ಶೋಷಣೆಗಳ ಕುರಿತು ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಇಲಾಖೆಗಳಿಗೆ ಕೂಡಲೇ ಮಾಹಿತಿ ನೀಡುವ ಮೂಲಕ ಮಕ್ಕಳನ್ನು ಶೋಷಣೆಯಿಂದ ತಪ್ಪಿಸಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಜೆ. ಎನ್. ಸುಬ್ರಹ್ಮಣ್ಯ ಹೇಳಿದರು.

ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ 1098 ಹಾಗೂ ವಿದ್ಯೋದಯ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಭಾನುವಾರ ನಡೆದ ಮಕ್ಕಳ ದಿನಾಚರಣೆ ಹಾಗೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಹಲವು ಕಾನೂನುಗಳು ಜಾರಿಯಲ್ಲಿವೆ. ಆದರೂ ಬಾಲಕಾರ್ಮಿಕರ ಬಳಕೆ ಮತ್ತು ಬಾಲ್ಯ ವಿವಾಹ ಗುಪ್ತವಾಗಿ ನಡೆಯುತ್ತಲೇ ಇವೆ. ಸಾರ್ವಜನಿಕರು ಅಂಥ ಪ್ರಕರಣಗಳು ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದರು.

734 ಕಾನೂನು ಅರಿವು ಕಾರ್ಯಕ್ರಮ
ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಅ. 2ರಿಂದ ಇಂದಿನ ವರೆಗೆ 734 ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿದ್ದು, 267 ಗ್ರಾಮಗಳ 44,419 ಮಂದಿ ಫಲಾನುಭವಿಗಳಿಗೆ ಕಾನೂನು ಅರಿವು ಮೂಡಿಸಲಾಗಿದೆ.

ಅಲ್ಲದೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಪೊಲೀಸರ ಮೂಲಕ ಮನೆ ಮನೆ ಭೇಟಿ ಮುಖಾಂತರ 2,35,623 ಮಂದಿಗೆ ದಿನನಿತ್ಯ ಅಗತ್ಯವಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.

ಬಾಲ ಕಾರ್ಮಿಕರ ಸಮೀಕ್ಷೆ
ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಲು ಬಾಲ ಕಾರ್ಮಿಕರ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ.

ಜನಜಾಗೃತಿಯಿಂದ ಮಾತ್ರ ಮಕ್ಕಳ ಮೇಲಿನ ಶೋಷಣೆ ತಪ್ಪಿಸಲು ಸಾಧ್ಯ. ಸಾರ್ವಜನಿಕರು ಕಾನೂನು ಕುರಿತು ಅರಿವು ಹೊಂದಿದ್ದು, ಮಕ್ಕಳ ಶೋಷಣೆ ಪ್ರಕರಣ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಮಕ್ಕಳನ್ನು ಅಲ್ಲಿಂದ ರಕ್ಷಿಸಲು ಮತ್ತು ಅವರಿಗೆ ಸೂಕ್ತ ರಕ್ಷಣೆ ಹಾಗೂ ಪುನರ್ವವಸತಿ ಒದಗಿಸಲು ಸಾಧ್ಯವಾಗಲಿದೆ ಎಂದರು.

ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಬಾಲಕಿಯರ ಬಾಲಮಂದಿರದ ಮಕ್ಕಳಿಂದ ಬಾಲ್ಯ ವಿವಾಹ ತಡೆ, ಬಾಲ ಕಾರ್ಮಿಕ ತಡೆ, ಭಿಕ್ಷಾಟನೆ ತಡೆ ಕುರಿತು ಕಿರುನಾಟಕ ಪ್ರದರ್ಶನ ನಡೆಯಿತು.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಕಲ್ಪನಾ ಎರ್ಮಾಳ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಬಿ. ಪುರ್ಟಾಡೋ, ಪ. ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್. ಎಚ್. ನಾಗೂರ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಇದ್ದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ ಸ್ವಾಗತಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ವಂದಿಸಿದರು. ಎನ್.ಆರ್.ಎಲ್.ಎಂ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!