Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮರೀಚಿಕೆಯಾದ ಸಮಾನತೆಯ ಹಕ್ಕು

ಮರೀಚಿಕೆಯಾದ ಸಮಾನತೆಯ ಹಕ್ಕು

ಮರೀಚಿಕೆಯಾದ ಸಮಾನತೆಯ ಹಕ್ಕು
ಉಡುಪಿ: ಅಂಬೇಡ್ಕರ್ ಪ್ರಣೀತ ಸಂವಿಧಾನದಲ್ಲಿ ಎಲ್ಲ ಭಾರತೀಯರಿಗೂ ಸಮಾನ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಇತ್ಯಾದಿ ನಮೂದಿಸಲಾಗಿದ್ದರೂ ರಾಜಕೀಯ ಹಕ್ಕು ಮಾತ್ರ ಮೂಲಭೂತ ಹಕ್ಕಾಯಿತೇ ವಿನಾಃ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಹಕ್ಕುಗಳು ಮೂಲಭೂತ ಹಕ್ಕು ಪರಿಧಿ ಸೇರಿಕೊಳ್ಳದೇ ಮರೀಚಿಕೆಯಾಗಿದೆ. ಆದ್ದರಿಂದ ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೂ ಭಾರತದ ಸಂವಿಧಾನಕ್ಕೂ ಸಂಬಂಧವೇ ಇಲ್ಲ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಲ್ಪೆ ಗಾಂಧಿ ಶತಾಬ್ದಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ| ಬಾಬಾ ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯಾ ನಂತರದ ದೇಶದ ನಾಯಕತ್ವ ವಹಿಸಿಕೊಂಡ ಕಾಂಗ್ರೆಸ್, ಹಿಂದೂ ಸವರ್ಣೀಯರಿಗೆ ಆದ್ಯತೆ ನೀಡಿತೇ ವಿನಾಃ ದಲಿತರಿಗೆ ಅವಕಾಶ ನೀಡಿಲ್ಲ. ಪೂನಾ ಒಪ್ಪಂದದ ದಿನಗಳಿಂದಲೂ ಹೋರಾಡುತ್ತಿದ್ದ ಅಂಬೇಡ್ಕರ್, ಸಂವಿಧಾನ ರಚನಾ ಸಮಿತಿಗೆ ಆಯ್ಕೆಯಾಗುವುದು ಕಾಂಗ್ರೆಸ್ಸಿಗರಿಗೆ ಬೇಡವಾಗಿತ್ತು ಎಂದರು.

ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ದಲಿತ ಮುಖಂಡ ಸುಂದರ ಕಪ್ಪೆಟ್ಟು, ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಂವಿಧಾನದ ಆಶಯ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.

ಅಂಬೇಡ್ಕರ್ ಯುವಸೇನೆ ಮಾರ್ಗದರ್ಶಿ ರಮೇಶ್ ಪಾಲ್, ಭಾರತೀಯ ಸಂವಿಧಾನ ಎಂದರೆ ಮೀಸಲಾತಿಯಲ್ಲ. ಅದು ಜನರ ಬದುಕು. ಅದು ಉಳಿದರೆ ಮಾತ್ರ ದಲಿತರ ಸಮಗ್ರತೆ, ಸಂಸ್ಕೃತಿ ಮತ್ತು ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ ಎಂದರು.

ಯುವಸೇನೆ ಮುಖಂಡರಾದ ಮಂಜುನಾಥ ಕಪ್ಪೆಟ್ಟು, ವಾಸು ಮಾಸ್ತರ್, ದಯಾಕರ ಮಲ್ಪೆ, ರಾಮೋಜಿ, ಕೃಷ್ಣ ಶ್ರೀಯಾನ್, ದೀನೇಶ್ ಮೂಡುಬೆಟ್ಟು, ಗುಣವಂತ ತೊಟ್ಟಂ, ಸಂತೋಷ್ ಕಪ್ಪೆಟ್ಟು, ನಾರಾಯಣ ಕುಂದರ್, ಮುದ್ದು ಅಮೀನ್, ಆನಂದ ಸಾಲ್ಯಾನ್, ಶಾರದ ನೆರ್ಗಿ, ಶಶಿಕಲಾ ತೊಟ್ಟಂ ಮುಂತಾದವರಿದ್ದರು.

ದಲಿತ ಮುಖಂಡ ಗಣೇಶ್ ನೆರ್ಗಿ ಪ್ರಸ್ತಾವನೆಗೈದರು. ಭಗವಾನ್ ನೆರ್ಗಿ ಸ್ವಾಗತಿಸಿ, ಪ್ರಸಾದ್ ಮಲ್ಪೆ ವಂದಿಸಿದರು. ಅಶೋಕ್ ಪುತ್ರನ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!