Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಳೆ ಕೊಯ್ಲು ಘಟಕ ಅಳವಡಿಕೆ ಕಡ್ಡಾಯಗೊಳಿಸಿ

ಮಳೆ ಕೊಯ್ಲು ಘಟಕ ಅಳವಡಿಕೆ ಕಡ್ಡಾಯಗೊಳಿಸಿ

ಸುದ್ದಿಕಿರಣ ವರದಿ
ಸೋಮವಾರ, ಜೂನ್ 13

ಮಳೆ ಕೊಯ್ಲು ಘಟಕ ಅಳವಡಿಕೆ ಕಡ್ಡಾಯಗೊಳಿಸಿ

ಉಡುಪಿ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಈಗಾಗಲೇ ಕೈಗೊಂಡಿರುವ ಕ್ರಮಗಳ ಜೊತೆಗೆ ಇನ್ನಷ್ಟು ಹೆಚ್ಚಿನ ಚಟುವಟಿಕೆ ಕೈಗೊಳ್ಳುವಂತೆ ಕೇಂದ್ರ ರಕ್ಷಣಾ ಸಚಿವಾಲಯದ ನಿರ್ದೇಶಕ ಪೀಯುಷ್ ರಂಜನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ಸೋಮವಾರ, ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನ ಯೋಜನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆ ನೀರು ಕೊಯ್ಲು, ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣ, ಪ್ಲಾಂಟೇಶನ್, ಇಂಗು ಗುಂಡಿ ರಚನೆ, ಜಲ ಮೂಲಗಳ ಸಂರಕ್ಷಣೆ ಕುರಿತಂತೆ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ನಗರ ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗ ಮಳೆ ನೀರು ಕೊಯ್ಲು ಘಟಕ ಅಳವಡಿಕೆ ಕಡ್ಡಾಯಗೊಳಿಸುವಂತೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲಶಕ್ತಿ ಅಭಿಯಾನ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸುವಂತೆ ಹಾಗೂ ಅಂತರ್ಜಲ ವೃದ್ಧಿಯ ಪ್ರಯೋಜನಗಳ ಕುರಿತಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಆಯೋಜಿಸುವಂತೆ ಹಾಗೂ ತ್ಯಾಜ್ಯ ನೀರಿನ ಸಮರ್ಪಕ ಮರುಬಳಕೆ ಮಾಡುವಂತೆ ತಿಳಿಸಿದರು.

ಅಂತರ್ಜಲ ವೃದ್ಧಿಗೆ ಕ್ರಮ
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, ಜಿಲ್ಲೆಯಲ್ಲಿ 1,400ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಉದ್ಯೋಗ ಖಾತ್ರಿ ಯೋಜನೆಯಡಿ ಕರೆಗಳ ಅಭಿವೃದ್ಧಿ ಹಾಗೂ ತೆರೆದ ಬಾವಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಹಿಂದೆ ಜಿಲ್ಲೆಯಲ್ಲಿ 180 ಅಡಿಯ ಕೆಳಗೆ ನೀರು ದೊರೆಯುತ್ತಿದ್ದು, ಪ್ರಸ್ತುತ ಈ ಪ್ರಮಾಣ 160 ಅಡಿಗೆ ತಲುಪಿದೆ ಎಂದರು

ಸಭೆಯಲ್ಲಿ ಕೇಂದ್ರದ ಜಲಶಕ್ತಿ ಅಭಿಯಾನ ಯೋಜನೆ ವಿಜ್ಞಾನಿ ಹಾಗೂ ತಾಂತ್ರಿಕ ಅಧಿಕಾರಿ ಡಾ. ಲಕ್ಷ್ಮೀನಾರಾಯಣ ತುಕಾರಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!