Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಹನೀಯರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಲು ಕರೆ

ಮಹನೀಯರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಲು ಕರೆ

ಸುದ್ದಿಕಿರಣ ವರದಿ
ಮಂಗಳವಾರ, ಫೆಬ್ರವರಿ 8

ಮಹನೀಯರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಲು ಕರೆ
ಉಡುಪಿ: ಮಹನೀಯರ ಜಯಂತಿಗಳನ್ನು ಕೆಲವೊಂದು ಜಾತಿಗಳಿಗೆ ಸೀಮಿತಗೊಳಿಸದೇ ಸಮಾಜದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಸವಿತಾ ಮಹರ್ಷಿ ಜಯಂತಿ ಅಂಗವಾಗಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮಹರ್ಷಿಗಳನ್ನು ಒಂದೇ ವರ್ಗಕ್ಕೆ ಸೀಮಿತಗೊಳಿಸಬಾರದು. ಏಕೆಂದರೆ ಅವರು ತೋರಿಸಿಕೊಟ್ಟ ವಿಚಾರಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ನಾವು ಜಾತಿ, ಕಟ್ಟುಪಾಡುಗಳನ್ನು ತೊರೆದು ವೈಜ್ಞಾನಿಕ ಯುಗದಲ್ಲಿ ಸಮಾನತೆ ಬೆಳೆಸಿಕೊಳ್ಳಬೇಕು ಎಂದರು.

ಕೋವಿಡ್ ಹಿನ್ನೆಲೆಯಿಂದ ಜಯಂತಿಯನ್ನು ಸರಳವಾಗಿ ಆಚರಿಸಿದರೂ ಅವರ ತತ್ವಗಳನ್ನು ವರ್ಷದ 365 ದಿನಗಳೂ ಕೂಡ ಪಾಲಿಸುವಂತಾಗಬೇಕು. ಉತ್ತಮ ಪರಂಪರೆ ಇರುವ ಸವಿತಾ ಸಮಾಜ ಒಗ್ಗಟ್ಟಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬಂದು ಇತರರಿಗೆ ಆದರ್ಶಪ್ರಾಯರಾಗಿರಬೇಕು ಎಂದರು.

ಉಡುಪಿ ಜಿಲ್ಲಾ ಸವಿತಾ ಸಮಾಜದ ವಿಶ್ವನಾಥ ನಿಂಜೂರು ಮಾತನಾಡಿ, ಸವಿತಾ ಮಹರ್ಷಿ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು. ಅವರು ಸವಿತಾ ಸಮಾಜದ ಮೂಲಪುರುಷ ಎಂದರು.

ಕಾರ್ಯದರ್ಶಿ ಕುರ್ಕಾಲು ಸದಾಶಿವ ಬಂಗೇರ ಮಾತನಾಡಿ, ಧರ್ಮ ಜ್ಞಾನ ಹೊಂದಿದ್ದ ಸವಿತಾ ಮಹರ್ಷಿ ಹಿಂದೂ ಧರ್ಮದ ಪವಿತ್ರ ಚತುರ್ವೇದಗಳಲ್ಲಿ ಒಂದಾದ ಸಾಮವೇದ ಬರೆದವರು ಎಂಬ ಪ್ರತೀತಿ ಇದೆ.

ಆದಿಯಿಂದ ಅಂತ್ಯದ ವರೆಗೂ ಕ್ಷೌರಿಕನ ಅಗತ್ಯವಿದೆ ಎಂದ ಅವರು, ಸವಿತಾ ಸಮಾಜದವರಿಗೆ ಸರ್ಕಾರದ ಸವಲತ್ತು ಸಿಗಬೇಕು. ಕ್ಷೌರಿಕ ವರ್ಗಕ್ಕೆ ವಿಶೇಷ ಸೌಲಭ್ಯ ಘೋಷಣೆ ಮಾಡಿ, ಸವಿತಾ ಸಮಾಜಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಮುಖಂಡರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!