Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ತ್ಯಾಜ್ಯ ಸಂಗ್ರಹಿಸಿ ಮಾದರಿಯಾದ ಅಧಿಕಾರಿಗಳು!

ತ್ಯಾಜ್ಯ ಸಂಗ್ರಹಿಸಿ ಮಾದರಿಯಾದ ಅಧಿಕಾರಿಗಳು!

ಉಡುಪಿ: ಕಬ್ಬಿನಾಲೆ ಮತ್ತು ನಾಡ್ಪಾಲಿನಲ್ಲಿ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿ, ಸೋಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಮಾಡಿದ್ದ ಅಧಿಕಾರಿಗಳ ತಂಡ, ಭಾನುವಾರ ಬೆಳಗಿನ ವಾಯು ವಿಹಾರ ಸಂದರ್ಭದಲ್ಲಿ ಆಗುಂಬೆ ಘಾಟಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರೊಂದಿಗೆ ಸೋಮೇಶ್ವರದಿಂದ ಆಗುಂಬೆ ಕಡೆಗೆ ಬೆಳಗಿನ ವಾಯು ವಿಹಾರ ಹೊರಟ ಅಧಿಕಾರಿಗಳಾದ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಉಪ ನಿರ್ದೇಶಕ ಚಂದ್ರಶೇಖರ ನಾಯಕ್, ಭೂ ದಾಖಲೆಗಳ ಉಪನಿರ್ದೇಶಕ ರವೀಂದ್ರ, ಹೆಬ್ರಿ ತಹಸೀಲ್ದಾರ್ ಪುರಂದರ ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು, ಗಾಜಿನ ಬಾಟಲಿಗಳು, ಪ್ಲಾಸ್ಟಿಕ್ ಕವರ್ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯ ಕಂಡು, ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು. ಆಗುಂಬೆ ಘಾಟಿಯ 14ನೇ ತಿರುವಿನಲ್ಲಿ ಸುಮಾರು 200 ಮೀ. ವರೆಗಿನ ರಸ್ತೆಯಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಎಸೆದಿದ್ದ 5ಕ್ಕೂ ಅಧಿಕ ಚೀಲ ಕಸ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಆಗುಂಬೆ ಘಾಟ್ ನ ಪರಿಸರ ಸ್ವಚ್ಛತೆಗೆ ಕಾರಣರಾದರು.

ಪ್ರವಾಸಿಗರು ಮತ್ತು ಸಾರ್ವಜನಿಕರು ಆಗುಂಬೆ ಘಾಟ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತಿತರ ಕಸ ಎಸೆಯುವುದರಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಮಾಲಿನ್ಯ ಉಂಟಾಗುವ ಜೊತೆಗೆ ವಿವಿಧ ಕಾಡುಪ್ರಾಣಿಗಳ ಆರೋಗ್ಯಕ್ಕೂ ತೊಂದರೆಯಾಗಲಿದ್ದು, ರಸ್ತೆ ಬದಿಯಲ್ಲಿ ಕಸ ಬಿಸಾಡದಂತೆ ಹೆಚ್ಚವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಿನಂತಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!