Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮಾನವೀಯತೆ ಶ್ರೇಷ್ಠ ಎಂಬುದೇ ಎಲ್ಲಾ ಧರ್ಮಗಳ ಸಾರ

ಮಾನವೀಯತೆ ಶ್ರೇಷ್ಠ ಎಂಬುದೇ ಎಲ್ಲಾ ಧರ್ಮಗಳ ಸಾರ

ಉಡುಪಿ: ಜಾತಿ, ಮತ, ಲಿಂಗ, ಧರ್ಮಗಳ ಕಂದಕಗಳನ್ನು ಕೆಡವಿ ಮನುಷ್ಯತ್ವದ ಹೆಸರಿನಲ್ಲಿ ಒಂದಾಗಬೇಕಾಗಿದೆ. ಮಾನವೀಯತೆಯೇ ಶ್ರೇಷ್ಠ ಎಂಬುದು ಎಲ್ಲ ಧರ್ಮಗಳ ಸಾರ. ಪ್ರೀತಿಯೇ ಮುಖ್ಯ ಎಂಬುದನ್ನು ಪ್ರವಾದಿ ಮಹಮ್ಮದ್ ಸೇರಿದಂತೆ ಎಲ್ಲ ದಾರ್ಶನಿಕರೂ ತೋರಿಸಿಕೊಟ್ಟಿದ್ದಾರೆ ಎಂದು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ನಿಕೇತನ ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಉಡುಪಿ ತಾಲೂಕು ಘಟಕ ವತಿಯಿಂದ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಮಾನವತೆಯ ಪ್ರತಿಪಾದಕ ಪ್ರವಾದಿ ಮಹಮ್ಮದ್ ಜೀವನ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಮ್ಮದ್ ಯಾಸೀನ್, ಇಂದು ಕೆಲವು ಮಾಧ್ಯಮಗಳು ಇಸ್ಲಾಮ್ ಧರ್ಮದ ಬಗ್ಗೆ ಸಮಾಜದಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿವೆ. ಜಿಹಾದ್ ಎಂದರೆ ಭಯೋತ್ಪಾದನೆ ಎಂಬರ್ಥದಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಜಿಹಾದ್ ಎಂಬುದು ಹೋರಾಟ ಎಂದರು.
ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್ ಧರ್ಮಗುರು ವಲೇರಿಯನ್ ಮೆಂಡೋನ್ಸಾ, ಪ್ರವಾದಿ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಜಾತಿ, ಮತ ಬೇಧ ಇಲ್ಲದೆ ಹೊಸ ಸಮಾಜ ನಿರ್ಮಾಣ ಇಂದಿನ ಅಗತ್ಯ ಎಂದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪ್ರವಾದಿ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಂಡಲ್ಲಿ ವ್ಯಕ್ತಿತ್ವ ವಿಕಸನದೊಂದಿಗೆ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣ ಆಗಬೇಕು ಎಂದರು.
ಮಲ್ಪೆ ಅಬೂಬಕರ್ ಸಿದ್ದೀಕ್ ಜುಮಾ ಮಸೀದಿಯ ಖತೀಬ್ ಇಮ್ರಾನುಲ್ಲಾ ಖಾನ್ ಮನ್ಸೂರಿ ವಿಷಯ ಮಂಡಿಸಿದರು. ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ದಿನೇಶ್ ಕಿಣಿ ಮುಖ್ಯ ಅಭ್ಯಾಗತರಾಗಿದ್ದರು.
ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಟಿ. ಎಂ. ಜಫ್ರುಲ್ಲಾ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ವಂದಿಸಿದರು. ಅಬ್ದುಲ್ ಅಜೀಝ್ ಉದ್ಯಾವರ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!