Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಗ್ರಾಹಕರು ಕೋವಿಡ್ ಮಾರ್ಗಸೂಚಿ ಪಾಲಿಸಲು ಅಂಗಡಿ ಮಾಲೀಕರಿಗೆ ಸೂಚನೆ

ಗ್ರಾಹಕರು ಕೋವಿಡ್ ಮಾರ್ಗಸೂಚಿ ಪಾಲಿಸಲು ಅಂಗಡಿ ಮಾಲೀಕರಿಗೆ ಸೂಚನೆ

ಸುದ್ದಿಕಿರಣ ವರದಿ
ಬುಧವಾರ, ಜನವರಿ 5, 2022

ಗ್ರಾಹಕರು ಕೋವಿಡ್ ಮಾರ್ಗಸೂಚಿ ಪಾಲಿಸಲು ಅಂಗಡಿ ಮಾಲೀಕರಿಗೆ ಸೂಚನೆ
ಉಡುಪಿ: ಕೋವಿಡ್ ಮಾರ್ಗಸೂಚಿಗಳನ್ನು ಗ್ರಾಹಕರು ಪಾಲಿಸುವಂತೆ ಅಂಗಡಿ ಮುಂಗಟ್ಟುಗಳ ಮುಖ್ಯಸ್ಥರು ಎಚ್ಚರಿಸುವ ಮೂಲಕ ವ್ಯವಹರಿಸಬೇಕು. ತಪ್ಪಿದಲ್ಲಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಎಚ್ಚರಿಕೆ ನೀಡಿದರು.

ಬುಧವಾರ ಮಣಿಪಾಲ ಟೈಗರ್ ಸರ್ಕಲ್, ಬಸ್ ನಿಲ್ದಾಣ, ರಸ್ತೆ ಬದಿಯ ಅಂಗಡಿ ಮುಂಗಟ್ಟು ಸೇರಿದಂತೆ ಮಾಲ್ ಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರಿಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಎಚ್ಚರಿಕೆ ನೀಡುವುದರ ಜೊತೆಗೆ ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟು ಮಾಡುವವರಿಗೆ ದಂಡ ವಿಧಿಸಲು ನಗರಸಭೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂಭಾಗ ಗ್ರಾಹಕರು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ಸೂಕ್ತ ಮಾರ್ಕಿಂಗ್ ಮಾಡುವುದರೊಂದಿಗೆ ಸಾರ್ವಜನಿಕರು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವಂತೆ ನಿಗಾ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಾಮಫಲಕ ಅಳವಡಿಸಬೇಕು. ಒಂದೊಮ್ಮೆ ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದಲ್ಲಿ ಅವರೊಂದಿಗೆ ವ್ಯವಹರಿಸಲು ಮುಂದಾಗಬಾರದು ಎಂದರು.

ಮಾಲ್ ಗಳ ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ಯಾನಿಂಗ್ ಮಾಡುವ ಜೊತೆಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು. ಮಾಲ್ ಒಳಗೆ ಜನದಟ್ಟಣೆಯಾಗದಂತೆ ಎಚ್ಚರ ವಹಿಸಿ ಶೇ. 50ಕ್ಕಿಂತ ಕಡಿಮೆ ಜನಸಾಂದ್ರತೆ ಇರುವಂತೆ ಕ್ರಮ ವಹಿಸಬೇಕು. ಒಂದೊಮ್ಮೆ ಅವುಗಳನ್ನು ಉಲ್ಲಂಘಿಸಿದಲ್ಲಿ ಮಾಲ್ ಗಳನ್ನು ಮುಚ್ಚುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸಾರ್ವಜನಿಕ ಸ್ಥಳದಲ್ಲಿ ಪ್ರತಿಯೊಬ್ಬರೂ ಕೋವಿಡ್ ನ ಸರಳ ಮಾರ್ಗಸೂಚಿಗಳಾದ ವ್ಯಕ್ತಿಗತ ಅಂತರ ಕಾಪಾಡುವುದು, ಮುಖಗವಸು ಧರಿಸುವುದು, ಸ್ವಚ್ಛತೆಗೆ ಆದ್ಯತೆ ಸೇರಿದಂತೆ ಇತರ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ತಪ್ಪಿದಲ್ಲಿ ಅಂಥವರಿಂದ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಲಾಗುವುದು ಎಂದರು.

ಔಷಧ ವ್ಯಾಪಾರ ಮಳಿಗೆಯಲ್ಲಿ ಮಾಲೀಕರಿಂದ ಕೆಮ್ಮು ಶೀತ ಜ್ವರದ ಔಷಧಿಗಳನ್ನು ವಿತರಿಸುವ ಮಾಹಿತಿ ಪಡೆದ ಡಿಸಿ, ಖರೀದಿಸಿದವರ ಮಾಹಿತಿಯ ಪ್ರತಿದಿನದ ವರದಿಗಳನ್ನು ಸೂಕ್ತ ಪ್ರಾಧಿಕಾರಕ್ಕೆ, ಹಿಂದಿನಂತೆ ಕಡ್ಡಾಯವಾಗಿ ನೀಡಬೇಕೆಂದು ಸೂಚನೆ ನೀಡಿದರು.

ಸ್ಥಳೀಯ ಸಂಸ್ಥೆಗಳ ಅಯುಕ್ತರು, ಮುಖ್ಯಾಧಿಕಾರಿಗಳು ಪ್ರತಿನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಡಾ| ಉದಯ ಶೆಟ್ಟಿ, ನಗರಸಭೆಯ ಸಿಬ್ಬಂದಿಗಳು ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!