ಉಡುಪಿ: ಇಲ್ಲಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಪುತ್ರಿಯ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಫೊಟೊಗೆ ಫೋಸ್ ನೀಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸರ್ಕಾರದ ನಿಯಮಗಳಿರುವುದು ಕೇವಲ ಸಾರ್ವಜನಿಕರಿಗೆ ಮಾತ್ರವೇ? ಜಿಲ್ಲಾಧಿಕಾರಿ, ಸರ್ಕಾರಿ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ, ನಿಷೇಧಾಜ್ಞೆಯಂಥ ಕಠಿಣ ನಿಯಮ ಜಾರಿಗೊಳಿಸಿದ್ದು, ಅವೆಲ್ಲವನ್ನು ಅನುಷ್ಠಾನಕ್ಕೆ ತರಬೇಕಾದ ಜಿಲ್ಲಾಧಿಕಾರಿಯೇ ನಿಯಮ ಮೀರಿ ವರ್ತಿಸಿರುವುದು ಖಂಡನೀಯ ಎಂದು ಅನೇಕರು ಟೀಕಿಸಿದ್ದಾರೆ.
ಮದುವೆ ಇತ್ಯಾದಿ ಶುಭ ಸಮಾರಂಭಗಳಿಗೆ 50 ಮಂದಿ ಮಾತ್ರ ಸೇರಲು ಅನುಮತಿ ಎಂಬ ನಿಯಮ ಪಾಲನೆ ಆಗಿದೆಯೇ ಎಂದೂ ಪ್ರಶ್ನಿಸಿದ್ದಾರೆ.
ಈಚೆಗೆ ಜಿಲ್ಲಾಧಿಕಾರಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಬಸ್ ಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಬಸ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಬಸ್ ನಿಂದ ಕೆಳಗಿಸಿದ್ದರು. ಬಸ್ ನಿಂದ ಇಳಿಸಿದರೆ ಮನೆ ತಲುಪುವುದು ತಡವಾಗುತ್ತದೆ ಎಂದು ವಿದ್ಯಾರ್ಥಿನಿಯೋರ್ವಳು ಬೇಸರ ವ್ಯಕ್ತಪಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಹಲವರು ಜಿಲ್ಲಾಧಿಕಾರಿ ನಡೆಯನ್ನು ಟೀಕಿಸಿದ್ದರು.
ಇದೀಗ ಅಧಿಕಾರಿಯೋರ್ವರ ಖಾಸಗಿ ಕಾರ್ಯಕ್ರಮದಲ್ಲಿ ಡಿಸಿ ಜಗದೀಶ ಅವರು ನಿಯಮ ಮೀರಿ ವರ್ತಿಸಿರುವುದರ ವಿರುದ್ಧವೂ ಟೀಕೆಗಳು ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.
ಜಿಲ್ಲಾಧಿಕಾರಿ ಸ್ಪಷ್ಟನೆ
ಎಎಸ್ಪಿ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಭಾಗವಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣರಾದ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರತಿಕ್ರಿಯಿಸಿದ್ದಾರೆ. `ಇದು ಮನೆಯಲ್ಲಿ ನಡೆದ ಕುಟುಂಬ ಕಾರ್ಯಕ್ರಮವೇ ಹೊರತು ಸಾರ್ವಜನಿಕ ಕಾರ್ಯಕ್ರಮ ಅಲ್ಲ’ ಎಂದು ಹೇಳಿದ್ದಾರೆ.
`ನನ್ನ ಮನೆಯ ಪಕ್ಕದಲ್ಲಿರುವ ಹೆಚ್ಚುವರಿ ಎಸ್ಪಿ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮವನ್ನು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರ ಆಪ್ತ ವರ್ಗದ ಕೆಲವೇ ಕೆಲವು ಮಂದಿ ಸೇರಿದ್ದರು. ಅದು ಸಾರ್ವಜನಿಕ ಸ್ಥಳ ಅಲ್ಲ. ಆದ್ದರಿಂದ ಅಲ್ಲಿ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಇಲ್ಲ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಸಾರ್ವಜನಿಕ ಸ್ಥಳದಲ್ಲಿ ಮಾತ್ರ’ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ