Tuesday, May 17, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಮಾ. 31ರಿಂದ ಕೋವಿಡ್ ನಿರ್ಬಂಧ ತೆರವು

ಮಾ. 31ರಿಂದ ಕೋವಿಡ್ ನಿರ್ಬಂಧ ತೆರವು

ಸುದ್ದಿಕಿರಣ ವರದಿ
ಬುಧವಾರ, ಮಾರ್ಚ್ 23

ಮಾ. 31ರಿಂದ ಕೋವಿಡ್ ನಿರ್ಬಂಧ ತೆರವು
ನವದೆಹಲಿ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನೂ ಮಾರ್ಚ್ 31ರಿಂದ ತೆಗೆದುಹಾಕಲು ನಿರ್ಧರಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಜೊತೆಗೆ ಕೋವಿಡ್ 19 ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟಂತೆ ವಿಪತ್ತು ನಿರ್ವಹಣಾ ಕಾಯ್ದೆಯನ್ನೂ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿರುತ್ತದೆ ಎಂದೂ ಕೇಂದ್ರ ಗೃಹ ಇಲಾಖೆ ಹೇಳಿದೆ.

ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅದರೊಂದಿಗೆ ಕೋವಿಡ್ ಲಸಿಕೆ ಅಭಿಯಾನವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮೂರನೇ ಅಲೆಗೆ ಕಾರಣವಾಗಿದ್ದ ಒಮಿಕ್ರಾನ್ ಸೋಂಕು ಪ್ರಸರಣ ತಗ್ಗಿದೆ. ಆದರೂ ಚೀನಾ, ದಕ್ಷಿಣ ಕೊರಿಯಾ, ಯುಕೆ, ಸಿಂಗಾಪುರ, ಫ್ರಾನ್ಸ್, ಜರ್ಮನಿಗಳಲ್ಲಿ ಮತ್ತೆ ಹೊಸದಾಗಿ ಕೊವಿಡ್ 19 ಪ್ರಸರಣ ಉತ್ತುಂಗಕ್ಕೇರಿದ್ದು, ಲಾಕ್ ಡೌನ್ ನಂಥ ನಿರ್ಬಂಧ ಹೇರಲಾಗುತ್ತಿದೆ. ಆದರೂ ಕೂಡ ಕೇಂದ್ರ ಸರ್ಕಾರ ಎಲ್ಲ ರೀತಿಯ ಕೊವಿಡ್ 19 ನಿರ್ಬಂಧ ಮಾರ್ಗಸೂಚಿಗಳನ್ನು ಮಾರ್ಚ್ 31ರಿಂದ ತೆಗೆದುಹಾಕುವುದಾಗಿ ಘೋಷಿಸಿದೆ.

ನಿರ್ಬಂಧ ತೆಗೆದುಹಾಕುವ ಬಗ್ಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಸಹಿ ಇರುವ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊವಿಡ್ 19 ನಿರ್ಬಂಧ ನಿಯಮಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧರಿಸಿದೆ. ಆದರೆ, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇನ್ನು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಹೇಳಲಾಗಿದೆ.

ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಈ ಪ್ರಕಟಣೆಯನ್ನು ಪರಿಗಣಿಸಬೇಕು. ಈ ಹಿಂದೆ ಕೊವಿಡ್ 19 ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ವಿಧಿಸಲಾಗಿದ್ದ ಮಾರ್ಗಸೂಚಿಗಳನ್ನು ರದ್ದು ಮಾಡಬಹುದು ಎಂದೂ ಗೃಹ ಇಲಾಖೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!