Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ಕರೆ

ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ಕರೆ

ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ಕರೆ

ಉಡುಪಿ, ಡಿ. 6 (ಸುದ್ದಿಕಿರಣ ವರದಿ): ಜಿಲ್ಲೆಯಲ್ಲಿ ಡಿ. 10ರಂದು ನಡೆಯುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನ ಪರಿಷತ್ ಚುನಾವಣೆ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಪೂರಕವಾಗಿ ಕಾರ್ಯನಿರ್ವಹಿಸುವಂತೆ ಎಲ್ಲಾ ಮೈಕ್ರೋ ಅಬ್ಸರ್ವರ್ ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್ವರ್ ಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಪಗಳನ್ನು ಗಮನಕ್ಕೆ ತನ್ನಿ
ಮತದಾನ ದಿನದಂದು ಮತಗಟ್ಟೆಯಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ವಯ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮೈಕ್ರೋ ಅಬ್ಸರ್ವರ್ ಗಳು ಪರಿಶೀಲಿಸಬೇಕು.

ಯಾವುದೇ ಲೋಪಗಳಿದ್ದಲ್ಲಿ ಮತಗಟ್ಟೆ ಅಧಿಕಾರಿಯ ಗಮನಕ್ಕೆ ತಂದು ಅದನ್ನು ಸರಿಪಡಿಸಬೇಕು. ಮತದಾನ ಸಂಪೂರ್ಣ ಪಾರದರ್ಶಕ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಬೇಕು.

ಮತದಾನದ ಪೂರ್ಣ ವಿವರಗಳನ್ನು ನೇರವಾಗಿ ಜಿಲ್ಲಾ ಚುನಾವಣಾ ವೀಕ್ಷಕರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಮೈಕ್ರೋ ಅಬ್ಸರ್ವರ್ ಗಳು ಮತದಾನ ಆರಂಭದಿಂದ ಮುಕ್ತಾಯದ ವರೆಗಿನ ಎಲ್ಲಾ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಈ ವರದಿಯನ್ನು ನಿಗದಿತ ಸಮೂನೆಯಲ್ಲಿ ದಾಖಲಿಸಿ, ಚುನಾವಣಾ ವೀಕ್ಷಕರಿಗೆ ಸಲ್ಲಿಸಬೇಕು. ಮತದಾನ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

158 ಮತಗಟ್ಟೆ
ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ 158 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು ಸೇರಿದಂತೆ ಒಟ್ಟು 2,505 ಮಂದಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.

ಎಲ್ಲಾ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 8ರಿಂದ ಅಪರಾಹ್ನ 4ರ ವರೆಗೆ ಮತದಾನ ನಡೆಯಲಿದೆ ಎಂದರು.

ಜಿಲ್ಲಾ ನೋಡೆಲ್ ಅಧಿಕಾರಿ ಅಶೋಕ್ ಕಾಮತ್ ಮೈಕ್ರೋ ಅಬ್ಸರ್ವರ್ ಗಳು ನಿರ್ವಹಿಸಬೇಕಾದ ಕಾರ್ಯಗಳು ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವ ಕುರಿತು ತರಬೇತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ, ಎನ್.ಐ.ಸಿ. ನಿರ್ದೇಶಕ ಮಂಜುನಾಥ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!